


ಕೊಪ್ಪಳ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಡಿಸೆಂಬರ್ 20 ರಿಂದ ಆರಂಭವಾಗಬೇಕು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ತಿಳಿಸಿದ್ದಾರೆ.
ಅವರು ಶನಿವಾರ ಮುನಿರಾಬಾದನ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಅಭಿಯಂತರರ ಕಚೇರಿಯಲ್ಲಿ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟಗೇಟ್ ಅಳವಡಿಸುವ ಕುರಿತು ಕೆ.ಎನ್.ಎನ್.ಎಲ್ ಅಧಿಕಾರಿಗಳು ಹಾಗೂ ತುಂಗಭದ್ರಾ ಮಂಡಳಿಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ತುಂಗಭದ್ರಾ ಜಲಾಶಯವು ನಮ್ಮ ಭಾಗದ ಲಕ್ಷಾಂತರ ರೈತರ ಜೀವನಾಡಿಯಾಗಿದ್ದು, ಪ್ರಸ್ತುತ ಹಳೆಯದಾಗಿರುವ ಜಲಾಶಯದ ಎಲ್ಲಾ 33 ಕ್ರಸ್ಟ್ ಗೇಟ್ ಗಳನ್ನು ಬದಲಾಯಿಸಲು 52 ಕೋಟಿ ರೂ.ಗಳ ವೆಚ್ಚದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಅದರಂತೆ ಪ್ರಸ್ತುತ ಕ್ರಸ್ಟ್ ಗೇಟ್ ಗಳ ಡಿಸ್ ಮೆಟಲಿಂಗ್ ಮತ್ತು ಇತರೆ ಕೆಲ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಇದಕ್ಕಾಗಿ ಗುತ್ತಿಗೆದಾರರು ಎರಡು ತಂಡಗಳನ್ನು ರಚಿಸಿ ಅವುಗಳಿಂದ ಬೇಗನೆ ಕೆಲಸವನ್ನು ಮಾಡಿಸಿಕೊಳ್ಳಬೇಕು. ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಡಿಸೆಂಬರ್ 20 ರಿಂದ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಈ ಕಾಮಗಾರಿಯು ಕಡ್ಡಾಯವಾಗಿ ಟೈಮ್ ಬಾಂಡ್ ಒಳಗೆ ಪೂರ್ಣಗೊಳ್ಳಬೇಕೆಂದು ಸೂಚನೆ ನೀಡಿದರು.
ನಮ್ಮ ರೈತರು ಎರಡನೇ ಬೆಳೆಗೆ ನೀರನ್ನು ತ್ಯಾಗ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಅರಿತುಕೊಂಡ ಕೆಲಸಮಾಡಬೇಕು. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಸೇರಿ ಎಲ್ಲಾ 33 ಕ್ರಸ್ಟ್ ಗೇಟ್ ಗಳನ್ನು ಬದಲಾಯಿಸುವುದಾಗಿ ರೈತರಿಗೆ ಮಾತು ನೀಡಿದ್ದು, ಅದನ್ನು ಉಳಿಸಿಕೊಳ್ಳಬೇಕಿದೆ. 2026ರ ಮುಂಗಾರು ವೇಳೆ ಜೂನ್ ಮಾಹೆಯಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತದೆ. ಮುಂಗಾರು ಬೆಳೆಗಳಿಗೆ ನೀರು ಒದಗಿಸಲು ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳುವುದು ಸಹ ನಮ್ಮ ಕರ್ತವ್ಯವಾಗಿದೆ. ಹಾಗಾಗಿ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಮೇ ತಿಂಗಳೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಿಸಿದಂತೆ ಅಧಿಕಾರಿಗಳು ತೀವ್ರ ನಿಗಾವಹಿಸಬೇಕು. ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ನಡೆಯುವ ಸ್ಥಳಕ್ಕೆ ಯಾರನ್ನು ಬಿಡಬಾರದು. ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಗಳಾಗದಂತೆ ಕುಡಿಯುವ ನೀರು ಪೂರೈಕೆಯನ್ನು ಸಮರ್ಪಕವಾಗಿ ಮಾಡಬೇಕು ಎಂದರು.
ತುಂಗಭದ್ರಾ ಜಲಾಶಯದ ಒಟ್ಟಾರೆ 23 ಟಿ.ಎಂ.ಸಿಯಷ್ಟು ನೀರನ್ನು ಬಳಕೆ ಮಾಡಿದ್ದು, ಪ್ರಸ್ತುತ ಜಲಾಶಯದ ಮಟ್ಟವು 1621.72 ಅಡಿ ಇದೆ. ಕ್ರಸ್ಟ್ ಗೇಟ್ ಗಳನ್ನು ಆಳವಡಿಸಲು 1613 ಅಡಿ ಇರಬೇಕು. ಉಳಿದ ಹೆಚ್ಚುವರಿ 9 ಅಡಿಯಷ್ಟು ನೀರನ್ನು ಬಳಸಿಕೊಂಡು ನಂತರ ಕ್ರಸ್ಟ್ ಗೇಟ್ ಆಳವಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಕನೀನಿನಿ ಮುನಿರಾಬಾದ್ ತುಂಗಭದ್ರ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾದ ಶ್ರೀನಿವಾಸ ಬಿ. ಮಲ್ಲಿಗವಾಡ ಹಾಗೂ ಹೊಸಪೇಟೆ ಟಿಬಿ ಡ್ಯಾಮಿನ ಟಿಬಿ ಬೋರ್ಡ್ ಅಧೀಕ್ಷಕ ಅಭಿಯಂತರರಾದ ಎಸ್.ನಾರಾಯಣ ನಾಯಕ ಅವರು ಸಚಿವರಿಗೆ ಮಾಹಿತಿ ನೀಡಿದರು.
ಮೆ. ಹಾರ್ಡ್ ವೇರ್ ಟೂಲ್ಸ್ ಮತ್ತು ಮಷಿನರಿ ಪ್ರೇಜಕ್ಟ್ ಪ್ರೈ. ಲಿಮಿಟೆಡ್ ಅಹಮದಾಬಾದ್ ಗುಜರಾತ್ ಕಂಪನಿಯ ಪ್ರತಿನಿಧಿಗಳು ಮಾತನಾಡಿ, ತಮ್ಮ ಸಂಸ್ಥೆಯಿಂದ ಪಶ್ಚಿಮ ಬಂಗಾಳದ ಪರಾಕ್ ಬ್ಯಾರೇಜ್ ಜಲಾಶಯದಲ್ಲಿ 124 ಗೇಟ್ ಗಳನ್ನು ಅಳವಡಿಸಿದ್ದು, ಇವುಗಳು ತುಂಗಭದ್ರಾ ಜಲಾಶಯದ ಗೇಟ್ ಗಳ ಗಾತ್ರದ್ದೆ ಆಗಿವೆ. ಇದಲ್ಲದೆ ಕೆ.ಆರ್.ಎಸ್. ಜಲಾಶಯ ಮತ್ತು ನಾರಾಯಣಪುರ ಡ್ಯಾಮಿನ ಗೇಟ್ ಗಳ ಅಳವಡಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದೇವೆ. ಒಂದು ಮಾಹೆಯಲ್ಲಿ 6 ಗೇಟ್ ಗಳಂತೆ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯವನ್ನು ಜಲಾಶಯದ ಎಡ, ಬಲ ಮತ್ತು ಮಧ್ಯ ಭಾಗದಲ್ಲಿ ಒಂದು ಸೇರಿ ಒಟ್ಟು ಮೂರು ತಂಡಗಳಲ್ಲಿ ಕೈಗೊಳ್ಳಲಾಗುವುದೆಂದು ಸಚಿವರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮುನಿರಾಬಾದ್ ಕೇಂದ್ರ ವಲಯದ ಕಾರ್ಯಪಾಲಕ ಅಭಿಯಂತರರು ಪ್ರೀತಿ ಪತ್ತಾರ, ಟಿಬಿ ಬೋರ್ಡ್ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ, ವಡ್ಡರ ಹಟ್ಟಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಎಂ.ಎಸ್ ಗೋಡೆಕರ್, ಮುನಿರಾಬಾದ್ ವಲಯದ ತಾಂತಿಕ್ರ ಸಹಾಕಯಕರಾದ ಯಲ್ಲಪ್ಪ, ವಿನಾಯಕ ಬಿ., ಬಸಪ್ಪ ಜಾನಕರ್, ಲಿಂಗರಾಜ್ ಹಾಗೂ ರಾಘವೇಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಧರಂರಾಜ್, ಸಹಾಯಕ ಇಂಜಿನಿಯರ್ ಹುಲಿರಾಜ್ ಮತ್ತು ಕಿರಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್