



ಕೊಪ್ಪಳ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಯಾರೂ ಜೀವನದಲ್ಲಿ ಶಿಸ್ತು ರೂಪಿಸಿಕೊಳ್ಳುವ ಮೂಲಕ ಮತ್ತೊಬ್ಬರಿಗೆ ಆದರ್ಶವಾಗಬೇಕು ಇದೊಂದು ಸಮವಸ್ತ್ರದ ಶಿಸ್ತಿನ ಇಲಾಖೆ ಎಂದು ಗೃಹರಕ್ಷಕ ದಳದ ಕೊಪ್ಪಳದ ಜಿಲ್ಲಾ ಸಮಾದೇಷ್ಟರಾದ ಲಕ್ಷ್ಮಣ ಕಡೆಮನಿ ಅಭಿಪ್ರಾಯ ಪಟ್ಟರು.
ಕೊಪ್ಪಳದ ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ೬೩ ನೆಯ ಅಖಿಲ ಭಾರತ ಗೃಹರಕ್ಷಕ ದಳದ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ ಆದರೆ ನಿಮಗೊಂದು ಕೆಲಸ ಇದೆ. ಅದರಲ್ಲಿ ತೃಪ್ತಿ ಪಡಬೇಕು. ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಂಡು ಕೆಲಸ ಮಾಡಬೇಕು, ಅದಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತದೆ. ನಿಸ್ವಾರ್ಥ ಸೇವೆ ನಮ್ಮ ಗುರಿಯಾಗಬೇಕು.
ಪೋಲಿಸ್ ಇಲಾಖೆಗೆ ಪೂರಕವಾಗಿ ಗೃಹರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನುಡಿದರು
ಡಾ ಗವಿಸಿದ್ದಪ್ಪ ಉಪನ್ಯಾಸಕರು ಮಾತನಾಡಿ ಗೃಹರಕ್ಷಕ ದಳದ ಸಂಸ್ಥೆಯ ಹಿನ್ನೆಲೆಯನ್ನು ವಿವರಿಸಿದರು.
ಪವಿತ್ರ ವಾದ ಕೆಲಸ ಇದು.೧೯೬೨ ರಲ್ಲಿ ಇದಕ್ಕೊಂದು ಕಾನೂನು ತರಲಾಯಿತು. ವಿಪತ್ತು ನಿರ್ವಹಣೆ ಸೇರಿದಂತೆ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ.ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಕೂಡಾ ಇವರಿಗೆ ಇದೆ. ಇವರ ಕಾರ್ಯ ಶ್ಲಾಘನೀಯ ಎಂದು ನುಡಿದರು.
ಸರಸ್ವತಿ ನಾಗರಾಜ ಮಾತನಾಡಿ ಶಿಸ್ತು ಮತ್ತು ಪ್ರಾಮಾಣಿಕತೆ ಮುಖ್ಯ ವಾಗಿದೆ. ಗೃಹರಕ್ಷಕ ದಳದ ಸದಸ್ಯರಿಗೆ ವರ್ಷದ ೩೬೫ ದಿನ ಕರ್ತವ್ಯ ಸಿಗಬೇಕು ಆ ನಿಟ್ಟಿನಲ್ಲಿ ಸರಕಾರ ಸ್ಪಂದಿಸಬೇಕು ಎಂದು ಹೇಳಿದರು.
ಕುಷ್ಟಗಿಯ ಘಟಕಾಧಿಕಾರಿ ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ ಮಾತನಾಡಿ ನಿಷ್ಕಾಮ್ ಸೇವೆಯನ್ನು ಸಲ್ಲಿಸುವ ಗೃಹರಕ್ಷಕರಿಗೆ ವಿವಿಧ ಇಲಾಖೆಗೆ ನಿಯೋಜನೆ ಮಾಡಲಾಗುತ್ತದೆ. ಆದರೆ ಕೆಲವು ಇಲಾಖೆಯಲ್ಲಿ ಅದೇ ಕೆಲಸ ಮಾಡಿದರೂ ನೀಡುವ ಗೌರವ ಧನದಲ್ಲಿ ತಾರತಮ್ಯ ವಿದೆ ಸಮಾನ ಕೆಲಸಕ್ಕೆ ಸಮಾನವೇತನ ನೀಡುವಂತಾಗಲಿ ಎಂದರು.
ಕಂಪನಿ ಕಮಾಂಡರ್ ವೀರಣ್ಣ ಬಡಿಗೇರ, ಅಗ್ನಿಶಾಮಕ ಅದಿಕಾರಿ ಸೇರಿದಂತೆ ಅನೇಕರು ಮಾತನಾಡಿದರು.
ಬೆಳಿಗ್ಗೆ ಕೊಪ್ಪಳದ ಅಶೋಕ ವೃತ್ತದಿಂದ ಜಿಲ್ಲೆಯ ಗೃಹರಕ್ಷಕರು ಪಥಸಂಚಲನ ನಡೆಸಿದರು.
ವಾರ್ಷಿಕ ವರದಿಯನ್ನು ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ ವಾಚನ ಮಾಡಿದರು. ಗೃಹರಕ್ಷಕರಿಗೆ ಪ್ರಮಾಣವಚನವನ್ನು ಪ್ಲಟೂನ ಕಮಾಂಡರ್ ನಾಗರಾಜ ಬಡಿಗೇರ ಬೋಧಿಸಿದರು. ಜಿಲ್ಲಾ ಬೋಧಕರಾದ ಯೋಗೇಂದ್ರ ,ಪ್ರಥಮ ದರ್ಜೆ ಸಹಾಯಕ ಮಂಜುನಾಥ ,ಪ್ಲಟೂನ ಕಮಾಂಡರ್ ಬಾಬುಸಾಬ ಪಿಂಜಾರ, ಅಮರೇಶ, ಸೇರಿದಂತೆ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಕನೂರ, ಕನಕಗಿರಿ, ಮುನಿರಾಬಾದ್, ತಾವರಗೇರಿ ಬೇವೂರ, ಕಾರಟಗಿ ಘಟಕದ ಘಟಕಾಧಿಕಾರಿಗಳು ಮತ್ತು ಗೃಹರಕ್ಷಕರು ಭಾಗವಹಿಸಿದ್ದರು. ಬೇನಾಳಪ್ಪ ನಿರೂಪಿಸಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್