
ಕೋಲಾರ, ೦೭ ಡಿಸೆಂಬರ್ (ಹಿ.ಸ):
ಆ್ಯಂಕರ್ : ಕರ್ನಾಟಕ ರಾಜ್ಯದಲ್ಲಿ ಅನ್ಯ ಭಾಷಿಕರ ಹಾವಳಿ ಹೆಚ್ಚಾಗಿದೆ. ಮುಂದೊ0ದು ದಿನ ಕನ್ನಡ ಹುಡುಕುವ ಸಂದರ್ಭ ಬಂದರೂ ಆಶ್ಚರ್ಯವಿಲ್ಲ. ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ ನಾವೆಲ್ಲರೂ ಕನ್ನಡವನ್ನು ಉಳಿಸಿ ಬೆಳೆಸಬೇಕಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಭಾನುವಾರ ಕನ್ನಡಸೇನೆ ಕರ್ನಾಟಕ ವತಿಯಿಂದ ೭೦ನೆಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡ ಮಾತಾಡುವ ಮೂಲ ಜನರನ್ನು ಹುಡುಕುವ ಬದಲು ಅನ್ಯ ಭಾಷಿಕರಿಗೆ ತಿಳಿವಳಿಕೆ ಕೊಟ್ಟು ಕನ್ನಡದ ಬಗ್ಗೆ ಅಭಿಮಾನ ಗೌರವ ಕೊಡುವ ಕೆಲಸವನ್ನು ನಾವು ಎಲ್ಲರನ್ನೂ ಮಾಡಬೇಕಾಗಿದೆ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅದರದ್ದೇ ಆದ ಇತಿಹಾಸವಿದೆ ಅದನ್ನು ಉಳಿಸಿ ಬಳಸೋಣ ಎಂದರು.
ಕೋಲಾರ ಜಿಲ್ಲೆಯು ಎರಡು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿ ಭಾಗದಿಂದ ಕೂಡಿದ್ದು ಭಾಷೆ ಮಿಶ್ರಿತಗೊಂಡಿದೆ ಜಿಲ್ಲೆಯು ವಿಶ್ವದಾದ್ಯಂತ ಹೆಸರು ಮಾಡಿರುವ ಚಿನ್ನ, ರೇಷ್ಮೆ, ಹಾಲಿಗೆ ಹೆಸರಾಗಿವೆ ಅಷ್ಟೇ ಅಲ್ಲದೇ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಕೊಟ್ಟ ಜಿಲ್ಲೆಯಾಗಿದೆ ಇಲ್ಲಿ ಕನ್ನಡಿಗರ ಅಭಿಮಾನಕ್ಕೆ ಯಾವುದರಲ್ಲೂ ಕಡಿಮೆ ಇಲ್ಲ ಎಂದರು.
ನರಸಾಪುರ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ಈಗಾಗಲೇ ೩೫ ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳು ನಡೆಯುತ್ತಿವೆ ಈ ಭಾಗದಲ್ಲಿ ಸರ್ಕಾರಿ ರಾಜಕಾಲುವೆ, ಕೆರೆ, ಜಾಗಗಳನ್ನು ಒತ್ತುವರಿಯಾಗಿ ಅನ್ಯ ಕಾರ್ಯಗಳಿಗೆ, ಸರ್ಕಾರಿ ಕಛೇರಿಗಳಿಗೆ ಜಾಗವಿಲ್ಲವಾಗಿದೆ ಸ್ಮಶಾನಕ್ಕೆ ಕೂಡಲೇ ಜಾಗ ಗುರುತಿಸಿ ಜಾಗ ಮಂಜೂರು ಮಾಡಿಸುವ ಜವಾಬ್ದಾರಿ ನಮ್ಮದು ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು ಸೂಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾರ್ಯದರ್ಶಿ ವೀರೇಂದ್ರ ಪಾಟೀಲ್, ವೈದ್ಯ ಡಾ.ನಾರಾಯಣಸ್ವಾಮಿ ಲಕ್ಷ್ಮೀಸಾಗರ ಸುನಿಲ್ ಕುಮಾರ್, ಮುಖಂಡರಾದ ನರಸಾಪುರ ನವೀನ್, ಜಾಲಿ ಬಾಬು, ಎಂ.ಟಿ.ಬಿ ಶ್ರೀನಿವಾಸ್, ಕನ್ನಡಸೇನೆಯ ಚಂದ್ರು ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ನರಸಾಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್