







ಕೊಪ್ಪಳ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಕ್ಕಳಿಗೆ ಅವರ ಬಾಲ್ಯದ ಹಂತದಲ್ಲಿಯೇ ಬಹುಮುಖಿ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ತರಬೇತಿ ನೀಡುವುದರಿಂದ ಅವರ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಕೊಪ್ಪಳ ನಗರದ ಹೊಸಪೇಟ ರಸ್ತೆಯ ಅಗ್ನಿಶಾಮಕ ಠಾಣೆಯ ಹತ್ತಿರದ ಕಲ್ವಾರಿ ಚಾಪೆಲ್ ಟ್ರಸ್ಟ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಹಾಗೂ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಮಕ್ಕಳ ಪಾಲನಾ ಸಂಸ್ಥೆಗಳು ಹಾಗೂ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ, ಕೊಪ್ಪಳ ಮಕ್ಕಳ ಜಾಗೃತಿ ಸಂಸ್ಥೆ, ಕಲ್ವಾರಿ ಚಾಪೆಲ್ ಟ್ರಸ್ಟ್, ಬೆಂಗಳೂರು, ಅಭಿನವ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘ, ಕೊಪ್ಪಳ ಮತ್ತು ಸ್ಪೂರ್ತಿಧಾಮ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ ಕುಣಿಕೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನಮ್ಮ ಮಕ್ಕಳ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ಬಾಲ್ಯದ ಜೀವನವನ್ನು ಕೇವಲ ಆಟೋಟಗಳಿಗೆ ಸೀಮಿತಗೊಳಿಸದೆ, ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಟೋಟಗಳ ಜೊತೆಗೆ ವಿದ್ಯಾಭ್ಯಾಸ, ಸಂಗೀತ, ಕಲೆ, ಮಾತುಗಾರಿಕೆಯ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಅವರವರ ಇಚ್ಛೆಯ ಮೇರೆಗೆ ಒಂದೊ0ದು ವೃತ್ತಿಯನ್ನು ಆರಿಸಿಕೊಳ್ಳಬಹುದು. ಪ್ರತಿಯೊಬ್ಬ ಮಗುವಿಗೂ ವಿಭಿನ್ನ ಆಸಕ್ತಿಗಳಿದ್ದು, ಅದನ್ನು ಗುರುತಿಸಬೇಕು. ಕೆಲವರಿಗೆ ಓದುವುದರಲ್ಲಿ ಆಸಕ್ತಿ ಕಡಿಮೆ ಇದ್ದರೂ, ಅವರಿಗೆ ಬೇರೆ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಇರುತ್ತದೆ. ಉದಾಹರಣೆಗೆ, ಆಟದಲ್ಲಿ, ಸಾಹಿತ್ಯದಲ್ಲಿ, ಚಿತ್ರಕಲೆಯಲ್ಲಿ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಹೆಚ್ಚಿದೆಯೊ ಅವರನ್ನು ಅದರಲ್ಲಿ ಹೆಚ್ಚಾಗಿ ತೊಡಗಿಸಿ ಅವರ ಭವಿಷ್ಯವನ್ನು ರೂಪಿಸಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಮಕ್ಕಳ ದಿನಾಚರಣೆ ಪ್ರಯುಕ್ತ ಇಂದು `ನಮ್ಮ ಮಕ್ಕಳ ದಿನಾಚರಣೆ' ಎನ್ನುವ ಅಂಶದೊಂದಿಗೆ ಕಾರ್ಯಕ್ರಮ ಮಾಡಲಾಗುತ್ತಿದೆ. ಮಕ್ಕಳ ಕೈಯಲ್ಲಿ ನಿರೂಪಣೆ ಮಾಡಿಸಿ ಅವರಿಗೆ ವೇದಿಕೆ ಭಯವನ್ನು ಹೋಗಲಾಡಿಸಲು ಒಂದು ಪ್ರಯತ್ನ ಮಾಡಿರುವುದು ತುಂಬಾ ಸಂತೋಷವಾಗಿದೆ. ಈ ಒಂದು ಕಾರ್ಯಕ್ರಮದ ಮೂಲಕ ಎಲ್ಲಾ ಮಕ್ಕಳಿಗೆ ಉತ್ತಮ ಭವಿಷ್ಯದ ಕಲ್ಪನೆ ಮೂಡಿಸುವಲ್ಲಿ ಒಂದು ಒಳ್ಳೆಯ ಪ್ರಯತ್ನವಾಗಿದೆ ಎಂದು ಹೇಳಿದರು.
ಸರ್ಕಾರದಿಂದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬೇರೆ ಬೇರೆ ರೀತಿಯ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಗಳ ಜಾರಿಗೆ ಎನ್.ಜಿ.ಓ ಸಂಸ್ಥೆಗಳು ಶ್ರಮಿಸುತ್ತಿವೆ. ಮಕ್ಕಳು ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಂಡು ತಮ್ಮ ಮುಂದಿನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ಮಕ್ಕಳು ಓದುವುದರ ಜತೆಗೆ ಇತರೆ ಕಲಾತ್ಮಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಉತ್ತಮ ಮಾತುಗಾರಿಕೆಯನ್ನು ರೂಪಿಸಿಕೊಂಡು ಭವಿಷ್ಯದಲ್ಲಿ ಒಳ್ಳೆಯ ವಾಗ್ಮಿಗಳಾಗಿರಿ ಎಂದು ತಿಳಿಸಿದರು.
ಮಮತೆಯ ತೊಟ್ಟಿಲಿಗೆ ಚಾಲನೆ: ಕೊಪ್ಪಳ ನಗರದ ಹೊಸಪೇಟ ರಸ್ತೆಯ ಕಲ್ವಾರಿ ಚಾಪೆಲ್ ಟ್ರಸ್ಟ್ನ ಮುಂಭಾಗದಲ್ಲಿ ಸ್ಥಾಪಿಸಲಾದ ಮಮತೆಯ ತೊಟ್ಟಿಲಿಗೆ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಚಾಲನೆ ನೀಡಿ, ಮಕ್ಕಳ ಕಲಿಕಾ ಚಟುವಟಿಕೆಗಳ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ್, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಹಾಂತಸ್ವಾಮಿ ಪೂಜಾರ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ.ಕೆ. ರಾಘವೇಂದ್ರ ಭಟ್, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳದ ವ್ಯವಸ್ಥಾಪಕರಾದ ಹರೀಶ್ ಜೋಗಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಬಿ. ಜಾಬಗೌಡರ ಸೇರಿದಂತೆ ಮತ್ತಿತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್