
ನವದೆಹಲಿ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಎರಿಗೇಸಿ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಮಣಿಸಿ ಜೆರುಸಲೆಮ್ ಮಾಸ್ಟರ್ಸ್ 2025 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ರ್ರ್ಯಾಪಿಡ್ ಹಂತದ ಮೊದಲ ಎರಡು ಪಂದ್ಯಗಳು ಡ್ರಾವಾದಾಗ, ಎರಿಗೇಸಿ ಮೊದಲ ಬ್ಲಿಟ್ಜ್ ಪಂದ್ಯದಲ್ಲಿ ಬಿಳಿ ಕಾಯಿಗಳೊಂದಿಗೆ ನಿರ್ಣಾಯಕ ಗೆಲುವು ದಾಖಲಿಸಿದರು. ಎರಡನೇ ಬ್ಲಿಟ್ಜ್ ಗೇಮ್‌ನಲ್ಲೂ ಮೇಲುಗೈ ಸಾಧಿಸಿದ್ದ ಅವರು, ಪ್ರಶಸ್ತಿಯನ್ನು ಖಚಿತಪಡಿಸಿಕೊಳ್ಳಲು ಡ್ರಾವನ್ನು ಒಪ್ಪಿಕೊಂಡರು.
22 ವರ್ಷದ ಎರಿಗೇಸಿ ಈ ಜಯದೊಂದಿಗೆ 55,000 ಡಾಲರ್ ಬಹುಮಾನ ಪಡೆದಿದ್ದಾರೆ.
ಸೆಮಿಫೈನಲ್‌ನಲ್ಲಿ ಎರಿಗೇಸಿ ರಷ್ಯಾದ ಪೀಟರ್ ಸ್ವಿಡ್ಲರ್ ಅವರನ್ನು ಸೋಲಿಸಿದ್ದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಆನಂದ್ ಇಯಾನ್ ನೆಪೋಮ್ನಿಯಾಚ್ಚಿಯನ್ನು ಮಣಿಸಿದ್ದರು. ಇಬ್ಬರೂ ತಮ್ಮ ಸೆಮಿಫೈನಲ್‌ನ ಎರಡನೇ ರ್ಯಾಪಿಡ್ ಪಂದ್ಯವನ್ನು ಗೆದ್ದಿದ್ದರು.
ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ವಿಡ್ಲರ್, ನೆಪೋಮ್ನಿಯಾಚ್ಚಿಯನ್ನು 2.5–1.5 ಅಂತರದಿಂದ ಸೋಲಿಸಿದರು. ಪ್ರಾಥಮಿಕ ರೌಂಡ್-ರಾಬಿನ್ ಹಂತದಲ್ಲಿ ಸ್ವಿಡ್ಲರ್ 8/11 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ನೆಪೋಮ್ನಿಯಾಚ್ಚಿ, ಆನಂದ್ ಮತ್ತು ಎರಿಗೇಸಿ ತಲಾ 7.5/11 ಅಂಕಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಂಡರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa