
ತಿರುವನಂತಪುರ, 31 ಡಿಸೆಂಬರ್(ಹಿ.ಸ.) :
ಆ್ಯಂಕರ್ : ಕೇರಳದ ತಿರುವನಂತಪುರದಲ್ಲಿ ನಡೆದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈವಿಧ್ಯತೆಯ ನಡುವೆ ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣವೇ ಶ್ರೀ ನಾರಾಯಣ ಗುರುಗಳ ಗುರಿಯಾಗಿತ್ತೆಂದು ಹೇಳಿದರು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಮಾತನಾಡುವ ಕೋಮುವಾದದ ಅಪಾಯವನ್ನು ಗುರುಗಳು ಮುಂಚಿತವಾಗಿಯೇ ಎಚ್ಚರಿಸಿದ್ದರು ಎಂದು ಅವರು ಅಭಿಪ್ರಾಯಪಟ್ಟರು.
ನಾರಾಯಣ ಗುರುಗಳು ಕೇವಲ ಸಂತನಲ್ಲ, ಸಮಾನತೆ, ನೈತಿಕತೆ ಮತ್ತು ಸಾಮಾಜಿಕ ನ್ಯಾಯದ ಚಳವಳಿಯೇ ಆಗಿದ್ದರು. ಶಿವಗಿರಿ ತೀರ್ಥಯಾತ್ರೆಯು ಜಾತಿ ದೌರ್ಜನ್ಯಕ್ಕೆ ವಿರೋಧವಾಗಿ ಸಂವಾದ, ಸಮಾನತೆ ಮತ್ತು ನೈತಿಕತೆಯನ್ನು ಪ್ರತಿಪಾದಿಸುವ ‘ಕೋಮು-ವಿರೋಧಿ’ ಚಳವಳಿಯಾಗಿದೆ ಎಂದು ಸಿಎಂ ಹೇಳಿದರು. ಶಿಕ್ಷಣ, ಸಂಘಟನೆ ಮತ್ತು ಸ್ವಾವಲಂಬನೆಯ ಮೂಲಕ ಶೋಷಿತ ಸಮುದಾಯಗಳ ಸ್ವಾಭಿಮಾನವನ್ನು ಪುನರ್‌ಸ್ಥಾಪಿಸಿದವರು ನಾರಾಯಣ ಗುರುಗಳು ಎಂದರು.
“ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ಘೋಷಣೆಯ ಮೂಲಕ ಗುರುಗಳು ಶ್ರೇಣೀಕೃತ ವ್ಯವಸ್ಥೆಗೆ ಸವಾಲು ಹಾಕಿದರು. ಉದ್ಯೋಗ, ಕೈಗಾರಿಕೆ, ಕೌಶಲಾಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣವನ್ನು ಸಾಮಾಜಿಕ ವಿಮೋಚನೆಯ ಸಾಧನಗಳಾಗಿ ಗುರುಗಳು ಕಂಡರು. ಅವರ ಪ್ರಭಾವ ಕೇರಳಕ್ಕೆ ಮಾತ್ರ ಸೀಮಿತವಾಗದೆ ಕರ್ನಾಟಕದ ಕರಾವಳಿ ಭಾಗಗಳಲ್ಲಿಯೂ ಸುಧಾರಣಾ ಚಳವಳಿಗಳಿಗೆ ಪ್ರೇರಣೆಯಾಯಿತು.
ನಾರಾಯಣ ಗುರು–ಮಹಾತ್ಮಾ ಗಾಂಧಿಯವರ ಸಂವಾದವು ಸ್ವಾತಂತ್ರ್ಯ ಚಳವಳಿಯ ಚಿಂತನೆಗೆ ಹೊಸ ದಿಕ್ಕು ನೀಡಿತು. ಜಾತಿ ವೈವಿಧ್ಯವಲ್ಲ, ಅದು ಸಾಂಸ್ಥಿಕ ಅನ್ಯಾಯ ಎಂಬ ಅರಿವನ್ನು ಗುರುಗಳು ಗಾಂಧೀಜಿಗೆ ನೀಡಿದರು ಎಂದು ಸಿದ್ದರಾಮಯ್ಯ ಹೇಳಿದರು. ಇಂದಿನ ದಿನಗಳಲ್ಲಿ ಧರ್ಮವನ್ನು ಅಧಿಕಾರದ ಆಯುಧವಾಗಿಸುವ ಅಪಾಯ ಎದುರಿಸುತ್ತಿರುವಾಗ, ಶಿವಗಿರಿ ಒಂದು ನೈತಿಕ ಚಳವಳಿಯಾಗಿ ನಮಗೆ ದಾರಿ ತೋರಿಸಬೇಕು ಎಂದರು.
ಸಮಾಜದಲ್ಲಿ ದ್ವೇಷದ ರಾಜಕೀಯವನ್ನು ತಿರಸ್ಕರಿಸಿ, ಘನತೆ, ಸಂವಾದ ಮತ್ತು ನೈತಿಕ ಮೌಲ್ಯಗಳ ರಾಜಕೀಯವನ್ನು ಬಲಪಡಿಸೋಣ ಎಂದು ಮುಖ್ಯಮಂತ್ರಿ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa