ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ; ಅಧಿಕಾರಿಗಳ ನಿಯೋಜನೆ
ಭಕ್ತಾದಿಗಳು
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ; ಅಧಿಕಾರಿಗಳ ನಿಯೋಜನೆ


ಕೊಪ್ಪಳ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳದಲ್ಲಿ 2026ರ ಜನವರಿ 1 ರಿಂದ 7ರ ವರೆಗೆ ಜರುಗುವ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಿ, ಕಾರ್ಯ ಹಂಚಿಕೆ ಮಾಡಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಆದೇಶಿಸಿದ್ದಾರೆ.

ಗವಿಸಿದ್ದೇಶ್ವರ ಸಂಸ್ಥಾನ, ಶ್ರೀ ಗವಿಮಠದಿಂದ ಜ. 1 ರಿಂದ 7ರ ವರೆಗೆ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-2026ರ ನಿಮಿತ್ತ ಕಾರ್ಯಕ್ರಮಗಳು ಜರುಗಲಿದ್ದು, ಜ. 5ರ ಸೋಮವಾರದಂದು ಮಹಾ ರಥೋತ್ಸವ ಜರುಗಲಿದೆ. ಈ ಸಂಬಂಧ ಪೂರ್ವಭಾವಿ ಸಭೆಯನ್ನು ಕೈಗೊಂಡು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿರುತ್ತದೆ.

ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇಶದ ಹಾಗೂ ರಾಜ್ಯದ ಭಾಗಗಳಿಂದ ಆಗಮಿಸುವ ಸಾರ್ವಜನಿಕರು, ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ, ಆಹಾರ ವ್ಯವಸ್ಥೆ, ಜನ ಸಂದಣಿ ನಿರ್ವಹಣೆ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಪೊಲೀಸ್ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜೆಸ್ಕಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿಶಾಮಕ ಇಲಾಖೆ, ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ, ಲೋಕೋಪಯೋಗಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ನಿಯೋಜಿತ ಅಧಿಕಾರಿಗಳು ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಯಾವುದೇ ತರಹದ ತೊಂದರೆ ಅಥವಾ ಅನನುಕೂಲವಾಗದಂತೆ ಕರ್ತವ್ಯ ನಿರ್ವಹಿಸಬೇಕು. ನಿಯೋಜಿತ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ತರಹದ ಲೋಪ ಎಸಗಿದಲ್ಲಿ ಅಥವಾ ನಿರ್ಲಕ್ಷ್ಯತನ ತೋರಿದಲ್ಲಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande