
ಚೆನೈ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ತಮಿಳುನಾಡಿನಲ್ಲಿ ನಡೆಯುತ್ತಿರುವ 2025 ರ ಎಫ್‌ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾರತೀಯ ತಂಡ ತನ್ನ ಅಜೇಯ ಪ್ರದರ್ಶನವನ್ನು ಮುಂದುವರಿಸಿದೆ. ಮಂಗಳವಾರ ಸ್ವಿಟ್ಜರ್ಲೆಂಡ್ ವಿರುದ್ಧ ಹೇರಳ ಗೋಲುಗಳ ಮಳೆ ಸುರಿಸಿದ ಭಾರತವು 5-0 ಅಂತರದ ಸುಲಭ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ.
ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಪಂದ್ಯ ಆರಂಭದ 2ನೇ ನಿಮಿಷದಲ್ಲೇ ಮನ್ಮೀತ್ ಸಿಂಗ್ ಮೊದಲ ಗೋಲು ಬಾರಿಸಿದರು. 11ನೇ ನಿಮಿಷದಲ್ಲಿ ಮತ್ತೊಂದು ಫೀಲ್ಡ್ ಗೋಲು ಸೇರಿಸಿ ಮುನ್ನಡೆಯನ್ನು 2-0ಕ್ಕೆ ಹೆಚ್ಚಿಸಿದರು. 13ನೇ ನಿಮಿಷದಲ್ಲಿ ಶಾರದಾನಂದ ತಿವಾರಿ ಪೆನಾಲ್ಟಿ ಕಾರ್ನರ್ ಯಶಸ್ವಿಯಾಗಿ ಪರಿವರ್ತಿಸಿ ಭಾರತವನ್ನು 3-0ಕ್ಕೆ ತಂದು ಮಹತ್ವದ ಅಂತರವನ್ನು ನಿರ್ಮಿಸಿದರು.
ಅರ್ಧಾವಧಿಗೂ ಮುನ್ನವೇ ಭಾರತ ತನ್ನ ಪ್ರಾಬಲ್ಯವನ್ನು ಬಿಗಿಗೊಳಿಸಿತು. ಹಿಂದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಹೊಡೆದ ಅರ್ಶ್‌ದೀಪ್ ಸಿಂಗ್ 28ನೇ ನಿಮಿಷದಲ್ಲಿ ನಾಲ್ಕನೇ ಗೋಲು ಸೇರಿಸಿದರು. ಸ್ವಿಸ್ ತಂಡದ ಕೆಲವು ವೇಗದ ದಾಳಿಗಳನ್ನು ಗೋಲ್‌ಕೀಪರ್ ಪ್ರಿನ್ಸ್ ದೀಪ್ ಸಿಂಗ್ ಅದ್ಭುತ ಸೇವ್‌ಗಳ ಮೂಲಕ ತಡೆಯುವಲ್ಲಿ ಯಶಸ್ವಿಯಾದರು.
ಪಂದ್ಯದ ಕೊನೆಯ ಹಂತದಲ್ಲೂ ಭಾರತ ದಾಳಿಯನ್ನು ಮುಂದುವರಿಸಿತು. 54ನೇ ನಿಮಿಷದಲ್ಲಿ ಶಾರದಾನಂದ ತಿವಾರಿ ಮತ್ತೊಂದು ಪೆನಾಲ್ಟಿ ಕಾರ್ನರ್ ಗೋಲು ಬಾರಿಸಿ ತಂಡದ ಐದನೇ ಗೋಲು ಸೇರಿಸಿದರು. ನಿರಂತರ ಚುರುಕು ಆಟದ ಹಿನ್ನೆಲೆಯಲ್ಲಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಈ ಪಂದ್ಯಕ್ಕೂ ಮುನ್ನ ಚಿಲಿ (7-0) ಮತ್ತು ಒಮಾನ್ (17-0) ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ಭಾರತ, ಸ್ವಿಟ್ಜರ್ಲೆಂಡ್ ವಿರುದ್ಧ 5-0 ಜಯ ಸಾಧಿಸುವ ಮೂಲಕ ನಾಕೌಟ್ ಹಂತಕ್ಕೆ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ತಲುಪಿದೆ.
ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಬಲಿಷ್ಠ ಬೆಲ್ಜಿಯಂ ವಿರುದ್ಧ ಚೆನ್ನೈನಲ್ಲಿ ಕಣಕ್ಕಿಳಿಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa