ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯದಿದ್ದರೆ ಉಗ್ರ ಹೋರಾಟ : ಬೊಮ್ಮಾಯಿ‌ ಎಚ್ಚರಿಕೆ
ಹಾವೇರಿ, 29 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ. ರೈತ ಶಕ್ತಿ ದೊಡ್ಡದೋ, ಅಧಿಕಾರದ ಶಕ್ತಿ ದೊಡ್ಡದಿದೆಯೋ ನಿರ್ಧಾರವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಸಿ
Protest


ಹಾವೇರಿ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ. ರೈತ ಶಕ್ತಿ ದೊಡ್ಡದೋ, ಅಧಿಕಾರದ ಶಕ್ತಿ ದೊಡ್ಡದಿದೆಯೋ ನಿರ್ಧಾರವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು. ರೈತರ ಪರವಾಗಿ ಹಿಂದೆಯೂ ನಿಂತಿದ್ದೇನೆ, ಜೀವನದ ಕೊನೆವರೆಗೂ ನಿಲ್ಲುತ್ತೇನೆ ಎಂದರು.

ಶಿಗ್ಗಾವಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ರೈತರನ್ನು ಭೇಟಿ ಮಾಡಿ ಮಾತನಾಡಿದ ಅವರು, ಶಿಗ್ಗಾವಿ, ಹಾನಗಲ್ ಮತ್ತು ಸವಣೂರು ತಾಲೂಕುಗಳಲ್ಲಿ ಶೇ.80ರಷ್ಟು ರೈತರು ಮೆಕ್ಕೆಜೋಳ ಬೆಳೆಯುತ್ತಾರೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಿದ್ದರೂ ಖರೀದಿ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರದದ್ದೇ ಎಂದು ಹೇಳಿದರು. ಎಥೆನಾಲ್ ಕಂಪನಿಗಳು ಮಧ್ಯವರ್ತಿಗಳ ಮೂಲಕ ಖರೀದಿ ಮಾಡುತ್ತಿರುವುದನ್ನೂ ಅವರು ಖಂಡಿಸಿದರು.

ತಮ್ಮ ಸರ್ಕಾರದ ಅವಧಿಯಲ್ಲಿ ಎಪಿಎಂಸಿಗಳಲ್ಲಿ ರೈತರ ಕೊನೆ ಕಾಳಿನವರೆಗೂ ಖರೀದಿ, ಗೊಬ್ಬರ ಹಂಚಿಕೆ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಯಶಸ್ವಿನಿ ಯೋಜನೆ ಮುಂದುವರೆಸಿದ್ದನ್ನು ಸ್ಮರಿಸಿದ ಬೊಮ್ಮಾಯಿ, ಇಂದಿನ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಶಿಗ್ಗಾವಿಯಲ್ಲಿ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬೆಳೆ ಪರಿಹಾರ ಮತ್ತು ವಿಮಾ ಪರಿಹಾರದಲ್ಲೂ ಅನ್ಯಾಯವಾಗಿದೆ ಎಂದ ಅವರು, ತಕ್ಷಣ ಖರೀದಿ ಕೇಂದ್ರಕ್ಕೆ ದಿನಾಂಕ ಘೋಷಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಯುವ ಮುಖಂಡ ಭರತ ಬೊಮ್ಮಾಯಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande