

ಕೊಪ್ಪಳ, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲಾಡಳಿತ ಕಛೇರಿ ಸಭಾಂಗಣದಲ್ಲಿ ವಿಶ್ವ ಮಾನವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ರಾಷ್ಟ್ರಕವಿ ಕುವೆಂಪು ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ನಂತರ ಮಾತನಾಡಿ, ಕುವೆಂಪುರವರ ಕವನಗಳು ಅರ್ಥಗರ್ಭಿತವಾಗಿದ್ದು, ಅವರ ದಿವ್ಯ ಸಂದೇಶಗಳು ನಮಗೆ ದಾರಿದೀಪವಾಗಿವೆ. ಅವರ ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಕೊಪ್ಪಳದ ಸಾಹಿತಿ, ಹಿರಿಯ ಲೇಖಕರು ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜುಮ್‌ದಾರ್ ಅವರು ವಿಶೇಷ ಉಪನ್ಯಾಸ ನೀಡಿದರು
ಅವರು ಮಾತನಾಡಿ, ಕುವೆಂಪುರವರು ‘ಮನುಜ ಮತ ವಿಶ್ವಪಥ’ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವರಾಗಿದ್ದಾರೆ. ಕಥೆ, ಕವನ, ಕಾದಂಬರಿ, ವಿಮರ್ಶೆ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿಯೂ ಕುವೆಂಪುರವರು ಸಾಹಿತ್ಯ ರಚಿಸಿ, ಕನ್ನಡ ಅಗ್ರಮಾನ್ಯ, ರಾಷ್ಟ್ರಕವಿ ಎಂದೆನಿಸಿಕೊಂಡಿದ್ದಾರೆ.
ಅವರ ಸಾಹಿತ್ಯವನ್ನು ಅಧ್ಯಯನ ಮಾಡುವುದರ ಮೂಲಕ ಇಂದಿನ ಯುವ ಕವಿ, ಸಾಹಿತಿಗಳು ಕುವೆಂಪು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ಕುವೆಂಪು ರವರ ‘ಭಾರತ ಜನನಿಯ ತನುಜಾತೆ’ ಎಂಬ ಹಾಡನ್ನು ನಮ್ಮ ರಾಜ್ಯದ ನಾಡಗೀತೆಯಾಗಿ ಅಳವಡಿಸಿಕೊಳ್ಳಲಾಗಿದ್ದು, ಈ ಹಾಡು ಇಡೀ ಭಾರತದ ಪರಿಕಲ್ಪನೆಯನ್ನು ಮುಂದಿಡುತ್ತದೆ ಎಂದು ಹೇಳಿದರು.
ಕುವೆಂಪು ಅವರನ್ನು ಬರೀ ಗದ್ಯ, ಸಾಹಿತ್ಯಕ್ಕಷ್ಟೇ ಲೇಖಕರೆಂದು ಅವರನ್ನು ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ, ಅವರು ರಚಿಸಿದ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ, ಆಧುನಿಕ ಕಾಲದ ಶ್ರೇಷ್ಠ ಕಾವ್ಯಗಳಲ್ಲೊಂದಾಗಿದೆ ಎಂದರು.
ಕುವೆಂಪು ರವರು ಶಿಶು ಸಾಹಿತ್ಯವನ್ನು ಬರೆದಿದ್ದು, ಮನುಷ್ಯನಿಗೆ ಅಲ್ಲಿಂದ ಮಾನವೀಯ ಸಂದೇಶಗಳನ್ನು ತಿಳಿಸಿದ್ದಾರೆ. ಮಗು ಹುಟ್ಟಿನಿಂದಲೇ ವಿಶ್ವಮಾನವಾಗಿರುತ್ತದೆ. ಆದರೆ, ಅದು ಬೆಳೆದಂತೆಲ್ಲ ಅಲ್ಪ ಮಾನವನಾಗುತ್ತದೆ. ಏಕೆಂದರೆ, ಹಲವಾರು ಕಟ್ಟುಪಾಡುಗಳು ಆ ಮಗುವಿನ ತೆಲೆಯಲ್ಲಿ ಬರುವಂತೆ ಸುತ್ತಮುತ್ತಲಿನ ವಾತಾವರಣ ಕಾರಣವಾಗುತ್ತದೆ. ಇದು ಆಗಬಾರದು ಮತ್ತು ಪ್ರತಿಯೊಂದು ಮಗು ಬೆಳೆಯುತ್ತಾ ಹೋದಂತೆ ಜಾತಿಗೆ ಸೀಮಿತವಾಗಬಾರದು. ವಿಶಾಲವಾದ ಹೃದಯದಿಂದ ಬೆಳೆಯಬೇಕು. ಮನುಷ್ಯನು ಮಾನವೀಯ ಮೌಲ್ಯಗಳನ್ನು ಹೊಂದಬೇಕೆಂಬ ದಿವ್ಯ ಸಂದೇಶಗಳನ್ನು ನೀಡಿದ ಕುವೆಂಪುರವರು ವಿಶ್ವಮಾನವ ಅನಿಸಿಕೊಂಡಿದ್ದಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಮಾತನಾಡಿ, ಮಾನವ ಕುಲಕ್ಕೆ ಕುವೆಂಪುರವರು ನೀಡಿರುವ ಸಂದೇಶಗಳು ಸಾರ್ವಕಾಲಿಕವಾಗಿವೆ. ನಾವೆಲ್ಲರೂ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬಹುದಾದ ಶ್ರೇಷ್ಠ ಸಾಹಿತಿಗಳಲ್ಲಿ ಕುವೆಂಪು ರವರು ಪ್ರಮುಖರಾಗಿದ್ದಾರೆ. ಕುವೆಂಪು ರವರು ವಿಶ್ವ ಮಾನವ ಮತ್ತು ಪ್ರಕೃತಿ ಸೌಂದರ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ‘ಮನುಜ ಮತ ವಿಶ್ವಪಥ’ ಹೀಗೆ ಹಲವಾರು ಮಾನವೀಯ ಸಂದೇಶ ಸಾರಿದ ಮಹಾನ್ ಚೇತನ ಕುವೆಂಪುರವರ ವಿಶ್ವಮಾನವ ಸಂದೇಶ ನಾವು ಅರಿತುಕೊಳ್ಳಬೇಕು ಎಂದರು.
ನಿವೃತ್ತ ಪ್ರಾಚಾರ್ಯರು ಹಾಗೂ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ್ ಅವರು ಮಾತನಾಡಿ, ಕುವೆಂಪುರವರು ಜಾತಿ, ಮತ, ಪಂಥ, ದೇಶ, ಭಾಷೆ ಎಲ್ಲವನ್ನೂ ಮೀರಿ ಮೊದಲು ನಾವು ಮಾನವರಾಗಬೇಕು, ವಿಶ್ವ ಮಾನವರಾಗಬೇಕೆಂಬ ಸಂದಶೇವನ್ನು ನೀಡಿದ್ದಾರೆ. ಅವರ ವಿಚಾರಗಳನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಕುವೆಂಪು ರವರು ಹೇಳಿರುವ ಹಾಗೆ ನಾವೆಲ್ಲರೂ ವಿಶ್ವ ಮಾನವರಾಗಿ ಬಾಳಲು ಪ್ರಯತ್ನಿಸೋಣ ಎಂದು ಹೇಳಿದರು.
ಶ್ರೀ ಗುರುಕೃಪ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಕುವೆಂಪು ರವರು ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಮತ್ತು ಸಾಹಿತಿಗಳು, ಲೇಖಕರು ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್