
ಹುಬ್ಬಳ್ಳಿ, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ ಧಾರವಾಡ ಅವಳಿನಗರದ ನಾಗರಿಕರಿಗೆ ಸುಲಭವಾಗಿ ಆಧಾರ್ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು, ಹುಬ್ಬಳ್ಳಿಯಲ್ಲಿ ಇಂದಿನಿಂದ ಸೇವೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ. ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಧಾರವಾಡದ ಆಧಾರ್ ಕೇಂದ್ರವನ್ನು ಹೊಸ ಟೆಂಡರ್ ಮೂಲಕ ಶೀಘ್ರ ಪುನರಾರಂಭಿಸಲಾಗುವುದು ಎಂದರು.
ಹುಬ್ಬಳ್ಳಿ ನಗರದ ಕೇಶ್ವಾಪುರದ ಭವಾನಿನಗರದ ಎಸ್‌ಬಿಐ ಬ್ಯಾಂಕ್ ಹಿಂಭಾಗದ ಜೋಳದ ಕಾಂಪ್ಲೆಕ್ಸ್‌ನಲ್ಲಿ ನೂತನ ಯುಐಡಿಎಐ ಆಧಾರ್ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಕೇಂದ್ರದಲ್ಲಿ ಹೊಸ ಆಧಾರ್ ನೋಂದಣಿ, ಹೆಸರು–ವಿಳಾಸ–ಮೊಬೈಲ್ ಸಂಖ್ಯೆ ತಿದ್ದುಪಡಿ, ಜನ್ಮ ದಿನಾಂಕ ಬದಲಾವಣೆ, ಬಯೋಮೆಟ್ರಿಕ್ ಅಪ್‌ಡೇಟ್ ಸೇರಿದಂತೆ ಎಲ್ಲಾ ಆಧಾರ್ ಸಂಬಂಧಿತ ಸೇವೆಗಳು ಲಭ್ಯವಿರುತ್ತವೆ ಎಂದು ತಿಳಿಸಿದರು. ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಲು ಸೂಚನಾ ಫಲಕಗಳು, ಶುಲ್ಕದ ವಿವರ ಪ್ರದರ್ಶನ ಹಾಗೂ ಪಾರದರ್ಶಕ ಸೇವೆ ಕಡ್ಡಾಯವಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಕೇವಲ ಹುಬ್ಬಳ್ಳಿಯ ಕೇಂದ್ರ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಕೇಂದ್ರವಾಗಿರುವ ಧಾರವಾಡದಲ್ಲಿ ಆಧಾರ್ ಸೇವೆಯ ಬೇಡಿಕೆ ಹೆಚ್ಚಿರುವುದರಿಂದ, ಅಲ್ಲಿ ಕೇಂದ್ರ ಪುನರಾರಂಭಕ್ಕೆ ಯುಐಡಿಎಐಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ಪರಿಗಣಿಸಿ ಶೀಘ್ರವೇ ಧಾರವಾಡದಲ್ಲೂ ಸೇವೆ ಆರಂಭವಾಗಲಿದೆ ಎಂದು ತಿಳಿಸಿದರು.
ನೂತನ ಕೇಂದ್ರದಲ್ಲಿ ನಾಲ್ಕು ಕೌಂಟರ್‌ಗಳಿದ್ದು, ದಿನಕ್ಕೆ ಸುಮಾರು 1000–1200 ನೋಂದಣಿ ಹಾಗೂ ತಿದ್ದುಪಡಿ ಕಾರ್ಯಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa