ಮಕ್ಕಳ ಕಳ್ಳಿಯರೆಂದು ಥಳಿಸಿದ ಗ್ರಾಮಸ್ಥರು
ಗದಗ, 27 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಕ್ಕಳ ಕಳ್ಳಿಯರೆಂದು ತಪ್ಪಾಗಿ ಶಂಕಿಸಿ ಏಳು ಅಪರಿಚಿತ ಮಹಿಳೆಯರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣಕ್ಕೆ ಕಾರಣವಾಯಿತು. ಡೋಣಿ ಗ್ರಾಮದಲ್ಲ
ಫೋಟೋ


ಗದಗ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಕ್ಕಳ ಕಳ್ಳಿಯರೆಂದು ತಪ್ಪಾಗಿ ಶಂಕಿಸಿ ಏಳು ಅಪರಿಚಿತ ಮಹಿಳೆಯರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣಕ್ಕೆ ಕಾರಣವಾಯಿತು.

ಡೋಣಿ ಗ್ರಾಮದಲ್ಲಿ ಓಡಾಡುತ್ತಿದ್ದ ಅಪರಿಚಿತ ಏಳು ಮಹಿಳೆಯರನ್ನು ಕಂಡ ಗ್ರಾಮಸ್ಥರು, ಇತ್ತೀಚೆಗೆ ಮಕ್ಕಳ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಮಕ್ಕಳ ಕಳ್ಳಿಯರೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅನುಮಾನ ಗಟ್ಟಿಯಾಗುತ್ತಿದ್ದಂತೆ ಮಹಿಳೆಯರನ್ನು ಗ್ರಾಮದ ಬಸ್ ನಿಲ್ದಾಣದ ಬಳಿ ಕೂರಿಸಿ, ವಿಚಾರಣೆ ನಡೆಸದೆ ಹಿಗ್ಗಾಮುಗ್ಗಾ ಥಳಿಸಿರುವ ಆರೋಪ ಕೇಳಿ ಬಂದಿದೆ.

ಮಹಿಳೆಯರು ತಾವು ಕೂದಲಿನ ಪಿನ್‌ (ಹೇರ್ ಪಿನ್) ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಾಗಿದ್ದು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ಮೂಲದವರು ಎಂದು ತಿಳಿದುಬಂದಿದೆ. ತಮ್ಮನ್ನು ತಪ್ಪಾಗಿ ಶಂಕಿಸಲಾಗುತ್ತಿದೆ ಎಂದು ಮಹಿಳೆಯರು ಮನವಿ ಮಾಡಿಕೊಂಡರೂ, ಕೆಲಕಾಲ ಗ್ರಾಮಸ್ಥರು ಮಾತು ಕೇಳದೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಮಹಿಳೆಯರು ಭಯಭೀತರಾಗಿ ಅಳಲು ತೋಡಿಕೊಂಡ ದೃಶ್ಯಗಳು ಮನಕಲಕುವಂತಿದ್ದವು.

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಮುಂಡರಗಿ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಹಲ್ಲೆಗೊಳಗಾದ ಮಹಿಳೆಯರನ್ನು ಗ್ರಾಮಸ್ಥರಿಂದ ರಕ್ಷಿಸಿ, ವಿಚಾರಣೆಗಾಗಿ ಮುಂಡರಗಿ ಪೊಲೀಸ್ ಠಾಣೆಗೆ ಕರೆತಂದು ಸುರಕ್ಷತೆ ಕಳಿಸಿದ್ದಾರೆ. ಬಳಿಕ ಮಹಿಳೆಯರು ತಮ್ಮ ಗುರುತು ಹಾಗೂ ವೃತ್ತಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆ ಬಳಿಕ ಆರೋಪಗಳ ಆಧಾರದಲ್ಲಿ ಯಾರ ಮೇಲೂ ಹಲ್ಲೆ ನಡೆಸಬಾರದು, ಯಾವುದೇ ಅನುಮಾನ ಇದ್ದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ಗ್ರಾಮಸ್ಥರಿಗೆ ಕಿವಿಮಾತು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande