ಮೂಲ ಸೌಕರ್ಯ ನೀಡುವಂತೆ ಸ್ಥಳೀಯರ ಆಗ್ರಹ
ಗದಗ, 27 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಸ್ತೆ ಸಂಪರ್ಕ, ಒಳಚರಂಡಿ ಕನೆಕ್ಷನ್ ಹಾಗೂ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಆಗ್ರಹಿಸಿ ಹೊಂಬಳನಾಕಾ ಜನತಾ ಕಾಲೋನಿ ನಿವಾಸಿಗಳು ಹಾಗೂ ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ವತಿಯಿಂದ ಕಾಂಗ್ರೆಸ್ ಯುವ ನಾಯಕ ಹಾಗೂ ಗದಗ ಜಿಲ್
ಫೋಟೋ


ಗದಗ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಸ್ತೆ ಸಂಪರ್ಕ, ಒಳಚರಂಡಿ ಕನೆಕ್ಷನ್ ಹಾಗೂ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಆಗ್ರಹಿಸಿ ಹೊಂಬಳನಾಕಾ ಜನತಾ ಕಾಲೋನಿ ನಿವಾಸಿಗಳು ಹಾಗೂ ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ವತಿಯಿಂದ ಕಾಂಗ್ರೆಸ್ ಯುವ ನಾಯಕ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರು ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ, ಕಳೆದ 40 ವರ್ಷಗಳಿಂದ ಹೊಂಬಳನಾಕಾ ಜನತಾ ಕಾಲೋನಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಇಲ್ಲಿನ ನಿವಾಸಿಗಳು ಅನ್ಯಾಯ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಲೋನಿಯಲ್ಲಿ ರಸ್ತೆ ಸಂಪರ್ಕವೇ ಇಲ್ಲದಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಒಳಚರಂಡಿ ಕನೆಕ್ಷನ್ ಇಲ್ಲದ ಕಾರಣ ಮಳೆಗಾಲದಲ್ಲಿ ಕೊಳಕು ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪರಿಣಾಮ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ದಿನೇ ದಿನೇ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದು, ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ, ಮಹಿಳೆಯರು ಹಾಗೂ ವೃದ್ಧರಿಗೆ ನಿಶ್ಚಿಂತವಾಗಿ ನಡೆಯಲು ಉದ್ಯಾನವನ ಅಥವಾ ಗಾರ್ಡನ್ ವ್ಯವಸ್ಥೆಯೂ ಇಲ್ಲದಿರುವುದು ದುರಂತಕರ ಸಂಗತಿ ಎಂದು ಹೇಳಿದರು. ಅಲ್ಲದೇ ರಾಜಾ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತುಹೋಗಿರುವುದರಿಂದ ಮಳೆಗಾಲದಲ್ಲಿ ನೀರು ಮನೆಗಳೊಳಗೆ ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು.

ಈ ಪ್ರದೇಶದಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಮಕ್ಕಳು ಶಾಲೆಗೆ ಹೋಗಲು, ಮಹಿಳೆಯರು ಹಾಗೂ ಕಾರ್ಮಿಕರು ಕೆಲಸಕ್ಕೆ ತೆರಳಲು ಬಹಳ ಕಷ್ಟ ಎದುರಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್, ಅಗ್ನಿಶಾಮಕ ದಳದ ವಾಹನ, ನಗರಸಭೆಯ ಕಸದ ವಾಹನಗಳು ಕಾಲೋನಿಯೊಳಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಜನರ ಜೀವಕ್ಕೆ ಅಪಾಯ ಉಂಟಾಗುವ ಭೀತಿ ಸದಾ ಕಾಡುತ್ತಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪರಿಹಾರವಾಗಿ ರೈಲ್ವೆ ಹಳಿ ಪಕ್ಕದಲ್ಲಿರುವ ಹಳೆ ಕೋರ್ಟ್‌ನಿಂದ ಆರಂಭಗೊಂಡು ಈಗಾಗಲೇ ಡಿಸಿ ಮಿಲ್ ಕಾಂಪೌಂಡ್‌ವರೆಗೆ ಬಂದಿರುವ ರಸ್ತೆಯನ್ನು ಭಾಗಶಃ ಕಾಂಪೌಂಡ್ ಒಡೆದು ಹೊಂಬಳನಾಕಾ ಜನತಾ ಕಾಲೋನಿಗೆ ಸಂಪರ್ಕ ಕಲ್ಪಿಸಬೇಕು. ಇದರಿಂದ ಕಾಲೋನಿಯ ನಾಲ್ಕು ರಸ್ತೆಗಳಿಗೆ ಸಂಪರ್ಕ ದೊರೆತು, 40 ವರ್ಷಗಳಿಂದಲೂ ಬಾಕಿ ಇರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಜೊತೆಗೆ ಹಳೆ ಕೋರ್ಟ್ ವೃತ್ತ, ರೈಲ್ವೆ ನಿಲ್ದಾಣ ಸೇರಿದಂತೆ ಈ ಭಾಗಕ್ಕೆ ಸಂಚರಿಸುವ ಜನಸಾಮಾನ್ಯರಿಗೆ ಬಹುಪಯೋಗಿಯಾಗಲಿದೆ ಎಂದು ಸಂಘದವರು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರು ಪಾಟೀಲ, ಹೊಂಬಳನಾಕಾ ಜನತಾ ಕಾಲೋನಿಯ ಸಮಸ್ಯೆಗಳು ಗಂಭೀರವಾಗಿದ್ದು, ಶೀಘ್ರದಲ್ಲೇ ನಗರಸಭೆ ಅಧಿಕಾರಿಗಳೊಂದಿಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ರಸ್ತೆ, ಒಳಚರಂಡಿ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಶರಣಪ್ಪ ಸೂಡಿ, ರಾಘವೇಂದ್ರ ಗಾಮನಗಟ್ಟಿ, ಚಾಂದಸಾಬ ಬದಾಮಿ, ರಾಜು ತಹಶೀಲ್ದಾರ, ಸದ್ದಾಂಹುಸೇನ ಭಾಷಾ ಲಕ್ಷ್ಮೇಶ್ವರ, ಉಮೇಶ ಬಳಧಡಿ, ರಾಮಣ್ಣ ಹೇಳವರ, ಮಂಜುನಾಥ ಕಕ್ಕೇರಿ ಸೇರಿದಂತೆ ಹೊಂಬಳನಾಕಾ ಜನತಾ ಕಾಲೋನಿಯ ಅನೇಕ ನಿವಾಸಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande