ಉತ್ತಮ ಆರೋಗ್ಯ ವೃದ್ಧಿಗೆ ಪ್ರತಿದಿನ ಸಿರಿಧಾನ್ಯ ಬಳಕೆ ಅಗತ್ಯ : ಡಿಸಿ
ಗದಗ, 27 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಉತ್ತಮ ಆರೋಗ್ಯ ವೃದ್ಧಿಗೆ ಸಿರಿಧಾನ್ಯಗಳು ಅತ್ಯಂತ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು. ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಜಿಲ್
ಫೋಟೋ


ಗದಗ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಉತ್ತಮ ಆರೋಗ್ಯ ವೃದ್ಧಿಗೆ ಸಿರಿಧಾನ್ಯಗಳು ಅತ್ಯಂತ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಮತ್ತು ಕೃಷಿ ಸಂಬಂದಿತ ಇಲಾಖೆಗಳು, ಕೆ ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ಕೃಷಿಕ‌ ಸಮಾಜ, ಕೃಷಿ ತಂತ್ರಜ್ಞಾನ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳದ ಅಂಗವಾಗಿ ಜರುಗಿದ ಸಿರಿಧಾನ್ಯಗಳ‌ ನಡಿಗೆ ಸುಸ್ಥಿರ ಕೃಷಿಯ ಕಡೆಗೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಪೂರ್ವಜರು ಆಹಾರದಲ್ಲಿ ಸಿರಿಧಾನ್ಯಗಳನ್ನು ಪ್ರಮುಖವಾಗಿ ಬಳಸುತ್ತಿದ್ದರು. ಇದರಿಂದ ಅವರು ದೀರ್ಘಕಾಲ ಉತ್ತಮ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗಿತ್ತು. ಆದರೆ ಇಂದಿನ ಆಧುನಿಕ ಜೀವನ ಶೈಲಿಯ ಭರಾಟೆಯಲ್ಲಿ ಸಿರಿಧಾನ್ಯಗಳ ಬಳಕೆ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇಂದಿನ ಯುವಜನತೆ ಒತ್ತಡದ ಜೀವನ ನಡೆಸುತ್ತಿದ್ದು, ಸಮಯದ ಕೊರತೆಯಿಂದ ಫಾಸ್ಟ್ ಫುಡ್‌ಗಳ ಮೊರೆ ಹೋಗುತ್ತಿರುವುದು ಆರೋಗ್ಯಕ್ಕೆ ಮಾರಕವಾಗುತ್ತಿದೆ. ಕಡಿಮೆ ಸಮಯದಲ್ಲಿ ತಯಾರಾಗುವ ಆಹಾರಗಳ ಸೇವನೆಯಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಯುವಕರು ಈ ದೇಶದ ಭವಿಷ್ಯವಾಗಿದ್ದು, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಯುವಜನತೆ ಸೇರಿದಂತೆ ಎಲ್ಲ ವರ್ಗದ ಜನರು ತಮ್ಮ ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಸಿರಿಧಾನ್ಯಗಳು ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಪೌಷ್ಟಿಕ ಆಹಾರವಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರು ಸುಲಭವಾಗಿ ಬಳಸಿಕೊಳ್ಳಬಹುದು. ಸಿರಿಧಾನ್ಯಗಳ ಬಳಕೆಯಿಂದ ದೈಹಿಕ ಶಕ್ತಿ ಹೆಚ್ಚುವುದರ ಜೊತೆಗೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಹೀಗಾಗಿ ಮನೆಮನೆಯ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಂಟಿ ಕೃಷಿ ಅಧಿಕಾರಿ ಚೇತನಾ ಪಾಟೀಲ, ಜನರ ಆರೋಗ್ಯ ರಕ್ಷಣೆಯಲ್ಲಿ ಸಿರಿಧಾನ್ಯಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು. ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ನಾರುಪದಾರ್ಥ, ಪ್ರೋಟೀನ್ ಹಾಗೂ ಅಗತ್ಯ ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಅಡಕವಾಗಿವೆ. ಸಿರಿಧಾನ್ಯ ಆಧಾರಿತ ಆಹಾರ ಪದಾರ್ಥಗಳ ಸೇವನೆಯಿಂದ ಹೃದಯ ಆರೋಗ್ಯ ಉತ್ತಮವಾಗುತ್ತದೆ, ಮಧುಮೇಹ ನಿಯಂತ್ರಣ ಸಾಧ್ಯವಾಗುತ್ತದೆ ಹಾಗೂ ದೇಹದ ತೂಕ ಸಮತೋಲನದಲ್ಲಿರಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.

ಸಿರಿಧಾನ್ಯಗಳ ಬಳಕೆಯನ್ನು ಜನಪ್ರಿಯಗೊಳಿಸಲು ಮತ್ತು ಮನೆಮಟ್ಟದಲ್ಲೇ ಸಿರಿಧಾನ್ಯ ಆಧಾರಿತ ಖಾದ್ಯಗಳ ತಯಾರಿಕೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಸರ್ಕಾರವು ಸಿರಿಧಾನ್ಯಗಳ ಉತ್ಪಾದನೆ ಹಾಗೂ ಬಳಕೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವಣ್ಣವರ ಮಾತನಾಡಿ, ರಾಗಿ, ಜೋಳ, ಸಜ್ಜೆ, ನವಣೆ, ಗೊರಲು ಸೇರಿದಂತೆ ವಿವಿಧ ಸಿರಿಧಾನ್ಯಗಳಲ್ಲಿ ಅಪಾರ ಪೋಷಕಾಂಶಗಳು ಅಡಕವಾಗಿವೆ ಎಂದು ತಿಳಿಸಿದರು. ಇವುಗಳನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ದೇಹಕ್ಕೆ ಅಗತ್ಯವಿರುವ ಶಕ್ತಿ ದೊರೆಯುತ್ತದೆ. ಸಿರಿಧಾನ್ಯಗಳು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ದೀರ್ಘಕಾಲ ಆರೋಗ್ಯವಂತ ಜೀವನ ನಡೆಸಲು ನೆರವಾಗುತ್ತವೆ ಎಂದರು.

ಜಿಲ್ಲಾ ಸಿರಿಧಾನ್ಯ ಮೇಳದ ಅಂಗವಾಗಿ ಪಪಂ ಆವರಣದಿಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದವರೆಗೆ ಹಾಗೂ ಮುಳಗುಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತು ಕಾಲ್ನಡಿಗೆ ಜಾಥಾ ಜರುಗಿತು. ಜಾಥಾದಲ್ಲಿ ಸಿರಿಧಾನ್ಯಗಳ ಪೌಷ್ಟಿಕತೆ ಕುರಿತು ಘೋಷಣೆಗಳು ಮೊಳಗಿದವು. ಸಾರ್ವಜನಿಕರಲ್ಲಿ ಸಿರಿಧಾನ್ಯಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಎಂ. ನೀಲಗುಂದ, ಕೆ.ಎಲ್. ಕರಿಗೌಡರ, ಡಿಡಿಎ ಜಿ.ಎಸ್. ಸ್ಪೂರ್ತಿ, ಎಸ್.ಸಿ. ಬಡ್ನಿ ಸೇರಿದಂತೆ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande