ಯಾವುದೇ ಸಬೂಬು ನೀಡದೆ ಪ್ರಗತಿ ಸಾಧಿಸಿ : ಸಚಿವ ಪಾಟೀಲ ಸೂಚನೆ
ವಿಜಯಪುರ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಮುಂದಿನ ಸಭೆಯೊಳಗಾಗಿ ನಿಗದಿತ ಗುರಿ ಸಾಧಿಸಬೇಕು. ಯಾವುದೇ ಸಬೂಬು ನೀಡದೆ ಭೌತಿಕ ಪ್ರಗತಿ ಸಾಧಿಸಿ ಮಾಹಿತಿ ಒದಗಿಸುವಂತೆ ಕರ್ನಾಟಕ ನಗರ ನೀರು ಸರಬರಾಜು
ಪಾಟೀಲ


ವಿಜಯಪುರ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಮುಂದಿನ ಸಭೆಯೊಳಗಾಗಿ ನಿಗದಿತ ಗುರಿ ಸಾಧಿಸಬೇಕು. ಯಾವುದೇ ಸಬೂಬು ನೀಡದೆ ಭೌತಿಕ ಪ್ರಗತಿ ಸಾಧಿಸಿ ಮಾಹಿತಿ ಒದಗಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಸೂಚಿಸಿದರು.

ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಕುಡಿಯುವ ನೀರು ಪೂರೈಕೆ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರಿನ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಸೂಕ್ತ ಚಾರ್ಟ್ ಹಾಕಿಕೊಂಡು, ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಲು ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಕುಡಿಯುವ ನೀರಿನ ಕಾಮಗಾರಿಗೆ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದಲ್ಲಿ ನಿಮ್ಮ ಮೇಲಾಧಿಕಾರಿ- ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ಅವರೊಂದಿಗೆ ಚರ್ಚಿಸಿ, ಪರಿಹರಿಸಿಕೊಳ್ಳಿ, ಸರ್ಕಾರದ ಹಂತದಲ್ಲಿರುವ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ತಂದು ಶೀಘ್ರ ಪರಿಹಾರ ಕಂಡುಕೊಂಡು ಒಟ್ಟಾರೆ ಯಾವುದೇ ಕಾಮಗಾರಿ ನೈಜ ಕಾರಣವಿಲ್ಲದೇ ಬಾಕಿ ಇರದಂತೆ ನೋಡಿಕೊಂಡು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.

ಕುಡಿಯುವ ನೀರಿನ ಪೈಪಲೈನ್ ಕಾಮಗಾರಿ ಕೈಗೊಳ್ಳುವಾಗ ರಸ್ತೆ ಅಗೆತ ಮಾಡುವುದರಿಂದ ರಸ್ತೆ ಹಾಳಾಗಿ ಜನರಿಗೂ ಅನಾನೂಕುಲ ಹಾಗೂ ಸರ್ಕಾರಕ್ಕೂ ಹೊರೆಯಾಗುತ್ತದೆ. ಕಾಮಗಾರಿ ಕೈಗೊಳ್ಳಲು ಮಾರ್ಗಸೂಚಿಗಳಿದ್ದರೂ, ರಸ್ತೆ ಅಗೆದು ಕಾಮಗಾರಿ ಕೈಗೊಂಡ ಹಾನಿಗೆ ಯಾರೂ ಜವಾಬ್ದಾರರೂ ಎಂದು ಪ್ರಶ್ನಿಸಿದ ಸಚಿವರು, ಕಾಮಗಾರಿಗಳನ್ನು ಕೈಗೊಳ್ಳುವಾಗ ಸೂಕ್ತ ನಿರ್ದೇಶನ ಪಾಲಿಸಿಕೊಂಡು ಕಾಮಗಾರಿಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅಮೃತ-2 ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.

ನಗರಕ್ಕೆ ಅವಶ್ಯಕತೆ ಇರುವ ಕುಡಿಯುವ ನೀರಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಸುಮಾರು 10 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಎಲ್ಲ 60 ಬಾವಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈಗಾಗಲೇ 26 ಬಾವಡಿಗಳ ನೀರನ್ನು ಗೃಹಬಳಕೆಗೆ ಉಪಯೋಗಿಸಲಾಗುತ್ತಿದ್ದು, ಎಲ್ಲ 60 ಬಾವಡಿಗಳ ನೀರು ಬಳಕೆಯಾದಲ್ಲಿ ಅಂದಾಜು 10 ಎಂಎಲ್‍ಡಿ ನೀರಿನ ಲಭ್ಯತೆಯಾಗಿ ಕುಡಿಯುವ ನೀರಿನ ಒತ್ತಡ ಕಡಿಮೆಯಾಗುವುದರಿಂದ ಈ ಕುರಿತು ಅಧಿಕಾರಿಗಳು ಕ್ರಮ ವಹಿಸುವಂತೆ ಸಚಿವರು ಸೂಚನೆ ನೀಡಿದರು.

ಸಿಂದಗಿ ನಗರದ ವಾರ್ಡ ನಂ.1,2 ರಲ್ಲಿ ಯುಜಿಡಿ ಕಾಮಗಾರಿ ಕುರಿತು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಅಸಮಾಧಾನ ವ್ಯಕ್ತಪಡಿಸಿ, ಕಳೆದ ಒಂದು ವರ್ಷದಿಂದ ಫಾಲೋಅಪ್, ಹತ್ತಾರು ಬಾರಿ ಪುರಸಭೆಯಲ್ಲಿ ಸಭೆ ನಡೆಸಿ ಸೂಚಿಸಲಾಗಿತ್ತಾದ್ದರೂ ಕ್ರಿಯಾಯೋಜನೆಯ 94.ಕಿ.ಮೀ. ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಸಚಿವರು ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ನಿರ್ವಹಿಸಲು ಆಗದೆ ಇದ್ದಲ್ಲಿ, ಗುತ್ತಿಗೆದಾರರನ್ನು ಕಾಯ್ದು ಕುಳಿತುಕೊಳ್ಳದೇ,ರಿಸೆಟ್ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.56 ಹೆಚ್ಚಿನ ಮಳೆಯಾಗಿದೆ. 7.262ಲಕ್ಷ ಹೆಕ್ಟೆರ್ ಬಿತ್ತನೆಯಾಗಿದೆ. ಅತಿ ಹೆಚ್ಚು ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಯಲಾಗಿದೆ. 9827 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ರಸಗೊಬ್ಬರದ ಯಾವುದೇ ಕೊರತೆ ಇಲ್ಲ. 1.92 ಲಕ್ಷ ತೊಗರಿ ಹಾಗೂ 45 ಸಾವಿರ ಹೆಕ್ಟೆರ್ ಹತ್ತಿ ಬೆಳೆ ನಾಶವಾಗಿದ್ದು, ಎನ್‍ಆರ್‍ಎಫ್ & ಎಸ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ 35675 ರೈತರಿಗೆ 580 ಕೋಟಿ ರೂ. ಡಿಬಿಟಿ ಮೂಲಕ ಜಮೆ ಮಾಡಲಾಗಿದೆ. 9 ಸಾವಿರ ರೈತರಿಗೆ ತಾಂತ್ರಿಕ ಸಮಸ್ಯೆಗಳಿಂದ ಹಣ ಜಮೆಯಾಗಿರುವುದಿಲ್ಲ. ಈ ರೈತರಿಗೆ ಖಾತೆಗೆ ಹಣ ಜಮೆ ಮಾಡಲು ಇರುವ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕಾರ್ಯ ಗ್ರಾಮ ಪಂಚಾಯತ್‍ಗಳ ಮೂಲಕ ಮಾಡಲಾಗುತ್ತಿದೆ, ಈಗಾಗಲೇ ಜಿಲ್ಲೆಯಲ್ಲಿ 97 ತೊಗರಿ ಖರೀದಿ ಕೇಂದ್ರ ಹಾಗೂ 5 ಮೆಕ್ಕೆ ಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಫಸಲ ಬಿಮಾ ಯೋಜನೆಯಡಿ ನೊಂದಾಯಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಬೆಳೆ ವಿಮೆಯಡಿ ನೋಂದಾಯಿಸಿ, ವಿಮೆ ಕಂತು ಪಾವತಿಸುವುದರಿಂದ ರೈತರಿಗಾಗುವ ಅನುಕೂಲತೆಗಳ ಕುರಿತು ರೈತರಿಗೆ ಮನವರಿ ಮಾಡಿ, ಈ ಕುರಿತು ವ್ಯಾಪಕ ಪ್ರಚಾರ ಕೈಗೊಂಡು ರೈತರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಸಮರ್ಪಕ ದರ ದೊರೆಯಲು ಬೆಳೆ ನಾಶವಾಗದಂತೆ ತಡೆಗಟ್ಟಲು ಜಿಲ್ಲೆಯ ಎಲ್ಲ ತಾಲೂಕಿಗೊಂದು ಕೋಲ್ಡ ಸ್ಟೋರೇಜ್ ಶೈತ್ಯಾಗಾರ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಲಿಂಬೆ ಮಾದರಿಯಲ್ಲಿ ಡೋಣಿ ನದಿಯ ಬಿಳಿ ಜೋಳಕ್ಕೂ ಜಿಐ ಟ್ಯಾಗ್ ಒದಗಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾವು ಬೆಳೆದ ಬೆಳೆಗಳ ಮಾರುಕಟ್ಟೆಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ರೈತರಿಗೆ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ, ರಾತ್ರಿ ತಂಗಲು ಡಾರ್ಮೆಟರಿ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಬೇಕು. ಅತ್ಯಂತ ಕನಿಷ್ಠ ದರ ನಿಗದಿಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ರೈತ ಭವನಗಳಲ್ಲಿ ಡಾರ್ಮೆಟರಿ ಮಾದರಿ ತಂಗಲು ವ್ಯವಸ್ಥೆ ಕಲ್ಪಿಸುವ ಕುರಿತು ಪರಿಶೀಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲೆಯಲ್ಲಿ 5 ಮುಖ್ಯ 5 ಉಪ ಮುಖ್ಯ ಮಾರುಕಟ್ಟೆಗಳಿದ್ದು, ಬಬಲೇಶ್ವರ ಸೇರಿದಂತೆ ಎಲ್ಲೆಲ್ಲಿ ಅವಶ್ಯಕತೆವಿದ್ದೆಡೆ ತಾಲೂಕಿಗೊಂದು ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬೀದಿ ನಾಯಿಗಳ ಕಡಿತ ಪ್ರಕರಣಗಳನ್ನು ತಡೆಗಟ್ಟಲು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಾಣಿ ದಯೆಯೊಂದಿಗೆ ಜೀವ ಹಾನಿಯಾಗದಂತೆ ತಡೆಗಟ್ಟಲು ಅಭಿಯಾನದ ಮಾದರಿಯಲ್ಲಿ ಬೀದಿ ನಾಯಿಗಳು, ಬೆಳೆಗಳ ನಾಶಪಡಿಸುವ ಹಂದಿಗಳ ಹತೋಟಿಗೆ ಸೂಕ್ತ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮಾತನಾಡಿ, ನಮ್ಮ ಜಿಲ್ಲೆ ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ದಿ ಪಡೆದಿದೆ. ಹೆಚ್ಚಾಗಿ ಲಿಂಬೆ ಬೆಳೆ ಬೆಳೆಯುತ್ತಿರುವುದರಿಂದ ಲಿಂಬೆ ಅಭಿವೃದ್ದಿ ಮಂಡಳಿಯಿಂದ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ್ ನಿಗಮದ ಅಧ್ಯಕ್ಷರಾದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ದಿ ಕಾಮಗಾರಿ, ಅವಶ್ಯಕವಿರುವ ಅನುದಾನ, ಕಾಮಗಾರಿಗಳನ್ನು ಕೈಗೊಳ್ಳಲು ಇರುವ ಸಮಸ್ಯೆ ಕುರಿತು ಅಧಿಕಾರಿಗಳು ಮೊದಲೇ ಯಾವ ಕಾಮಗಾರಿ ಎಷ್ಟು ಅನುದಾನದ ಕೊರತೆ ಇದೆ, ಎಷ್ಟು ಬಾಕಿ ಇದೆ, ಯಾವ ಹಂತದಲ್ಲಿದೆ ಎಂಬ ಮಾಹಿತಿ ಒದಗಿಸಿದ್ದಲ್ಲಿ ತ್ವರಿತವಾಗಿ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಈ ಕುರಿತು ಗಮನ ಹರಿಸುವಂತೆ ಅವರು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಒತ್ತು ನೀಡಬೇಕು. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಯವ ಕೃಷಿ ಕುರಿತು ತಿಳುವಳಿಕೆ ಮೂಡಿಸಬೇಕು. ಸಾವಯವ ಕೃಷಿಕರ ಯಶೋಗಾಥೆಗಳ ಮೂಲಕ ಇತರ ರೈತರಿಗೂ ಪ್ರೇರೆಪಿಸಬೇಕು. ಇದರಿಂದ ರೈತರು ಸಾವಯವ ಕೃಷಿ ಬೆಳೆಯಲು ಮುಂದೆ ಬರುತ್ತಾರೆ ಎಂದು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಪಿ.ಎಚ್.ಪೂಜಾರ, ಎನ್.ರವಿಕುಮಾರ, ಸಂಸದರಾದ ರಮೇಶ ಜಿಗಜಿಣಗಿ,ಶಾಸಕರುಗಳಾದ ರಾಜುಗೌಡ ಭೀಮನಗೌಡ ಪಾಟೀಲ, ವಿಠ್ಠಲ ಕಟಕಧೋಂಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಇಲಿಯಾಸ ಬೋರಾಮಣಿ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande