ಕಾರಟಗಿ ಮನೆ ಕಳ್ಳತನ ; ಆರೋಪಿಗೆ 3 ವರ್ಷ ಜೈಲು ಶಿಕ್ಷೆ
ಕಾರಟಗಿ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕಾರಟಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮೀಪದ ಮನೆಯೊಂದರಲ್ಲಿ ನಡೆದಿದ್ದ ಬಂಗಾರದ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ನ್ಯಾಯಾಲಯವು ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2025ರ ಜನವರಿ 27ರಂ
ಕಾರಟಗಿ ಮನೆ ಕಳ್ಳತನ ; ಆರೋಪಿಗೆ 3 ವರ್ಷ ಜೈಲು ಶಿಕ್ಷೆ


ಕಾರಟಗಿ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕಾರಟಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮೀಪದ ಮನೆಯೊಂದರಲ್ಲಿ ನಡೆದಿದ್ದ ಬಂಗಾರದ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ನ್ಯಾಯಾಲಯವು ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

2025ರ ಜನವರಿ 27ರಂದು ಕಾರಟಗಿ ಪಟ್ಟಣದ ನಿವಾಸಿ ದಿಗಂಬರ ಎಂಬುವವರ ಮನೆಯ ಮೊದಲ ಮಹಡಿಯಲ್ಲಿ ವಾಸವಿದ್ದ ಸಾಕ್ಷಿದಾರರು ಕೆಲಸಕ್ಕೆ ಮತ್ತು ಉಳಿದ ಮನೆಯವರು ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡಿದ್ದ ಕಳ್ಳರು, ಬೀಗ ಮುರಿದು ಒಳನುಗ್ಗಿ ಸುಮಾರು 5 ತೊಲೆ ಬಂಗಾರದ ಆಭರಣಗಳನ್ನು (ಅಂದಾಜು ಮೌಲ್ಯ 2,48,000 ರೂ.) ಕಳ್ಳತನ ಮಾಡಿದ್ದರು. ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಕಾರಟಗಿ ಪಿ.ಎಸ್.ಐ ಕಾಮಣ್ಣ ಅವರು ಆರೋಪಿ ಶಿವಪ್ರಸಾದ ಅಲಿಯಾಸ್ ಶಿವಕುಮಾರ @ ಶಿವು ಎಂಬಾತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಗಂಗಾವತಿಯ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ (ಪ್ರಭಾರ) ನ್ಯಾಯಾಧೀಶರಾದ ನಾಗೇಶ ಪಾಟೀಲ ಅವರು ವಿಚಾರಣೆ ನಡೆಸಿ, ಸಾಕ್ಷ್ಯಾಧಾರಗಳ ಮೇರೆಗೆ ಆರೋಪಿತನು ತಪ್ಪಿತಸ್ಥನೆಂದು ತೀರ್ಮಾನಿಸಿ ಗುರುವಾರದಂದು ಶಿಕ್ಷೆ ಪ್ರಕಟಿಸಿದ್ದಾರೆ.

ಶಿಕ್ಷೆ ವಿವರ : ಬಿ.ಎನ್.ಎಸ್ ಕಲಂ 331(3)ರ ಅಡಿಯಲ್ಲಿ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5000 ರೂ. ದಂಡ. ಒಂದು ವೇಳೆ ದಂಡ ಕಟ್ಟದಿದ್ದಲ್ಲಿ ಹೆಚ್ಚುವರಿ 1 ತಿಂಗಳು ಜೈಲು ಶಿಕ್ಷೆ ಹಾಗೂ ಬಿ.ಎನ್.ಎಸ್ ಕಲಂ 305ರ ಅಡಿಯಲ್ಲಿ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5000 ರೂ. ದಂಡ (ದಂಡ ಕಟ್ಟದಿದ್ದಲ್ಲಿ ಹೆಚ್ಚುವರಿ 1 ತಿಂಗಳು ಶಿಕ್ಷೆ).

ಈ ಪ್ರಕರಣದ ತನಿಖೆಯಲ್ಲಿ ಪಿ.ಎಸ್.ಐ ಕಾಮಣ್ಣ ಅವರಿಗೆ ಸಿಬ್ಬಂದಿ ಮುತ್ತುರಾಜ (ಸಿಹೆಚ್-178) ಸಹಕರಿಸಿದ್ದು, ನ್ಯಾಯಾಲಯದ ವಿಚಾರಣಾ ಸಮಯದಲ್ಲಿ ಸಾಕ್ಷಿಗಳನ್ನು ಸಕಾಲಕ್ಕೆ ಹಾಜರುಪಡಿಸುವಲ್ಲಿ ಕಾರ್ತೀಕ್ (ಸಿಪಿಸಿ-320), ಅಶೋಕ, ಮರಿಯಪ್ಪ ಹಾಗೂ ಗಂಗಾಧರ ಶ್ರಮಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕರುಣಾಕರ ಬಂಗಿ ಅವರು ಸಮರ್ಥವಾಗಿ ವಾದ ಮಂಡಿಸಿದರು ಎಂದು ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande