ಮಾಸಾಶನಕ್ಕಾಗಿ ಕುಸ್ತಿ ಪಟುಗಳಿಂದ ಅರ್ಜಿ ಆಹ್ವಾನ
ಕೊಪ್ಪಳ, 20 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರಿಯ ಮಟ್ಟದ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ 50 ವರ್ಷ ಮೇಲ್ಪಟ್ಟ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕೊಪ್ಪಳ ಜಿಲ್ಲೆಯ ಕುಸ್ತಿ ಕ್ರೀಡಾಪಟುಗಳ ಜೀವನ ನಿರ್ವಹಣೆಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಮಾಸಾಶನಕ್ಕಾಗಿ ಕುಸ್ತಿ ಪಟುಗಳಿಂದ ಅರ್ಜಿ ಆಹ್ವಾನ


ಕೊಪ್ಪಳ, 20 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರಿಯ ಮಟ್ಟದ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ 50 ವರ್ಷ ಮೇಲ್ಪಟ್ಟ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕೊಪ್ಪಳ ಜಿಲ್ಲೆಯ ಕುಸ್ತಿ ಕ್ರೀಡಾಪಟುಗಳ ಜೀವನ ನಿರ್ವಹಣೆಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾಸಾಶನ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಾಸಾಶನಕ್ಕಾಗಿ ಅಭ್ಯರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸಂದರ್ಭದಲ್ಲಿ ಪಡೆದ ಪ್ರಶಸ್ತಿ ಪತ್ರ ಮಾತ್ರ ಪರಿಗಣಿಸಲಾಗುವುದು. ಅಂತರರಾಷ್ಟ್ರಿಯ ಮಟ್ಟದ ವಿಜೇತರಿಗೆ ರೂ.6000, ರಾಷ್ಟ್ರೀಯ ಮಟ್ಟದ ವಿಜೇತರಿಗೆ ರೂ.5000, ರಾಜ್ಯ ಮಟ್ಟದ ವಿಜೇತರಿಗೆ ರೂ.4500 ಗಳ ಮಾಸಾಶನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.

ಮಾಸಾಶನ ಪಡೆಯಲು ಅರ್ಜಿದಾರರು ಕನಿಷ್ಠ 50 ವರ್ಷ ವಯಸ್ಸಿನವರಾಗಿರಬೇಕು. ವಯಸ್ಸಿನ ಧೃಡೀಕರಣವನ್ನು ಸರ್ಕಾರದ ಆರೋಗ್ಯ ಇಲಾಖಾ ಜಿಲ್ಲಾ ಸರ್ಜನ್‌ರವರು ಪರಿಶೀಲಿಸಿ ನೀಡಿರಬೇಕು. ಒಂದು ವೇಳೆ ಅರ್ಜಿದಾರರು ಮಾನ್ಯತೆ ಪಡೆದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾಗ ಆಕಸ್ಮಿಕ ಘಟನೆಯಿಂದ ಶಾಶ್ವತವಾಗಿ ಅಸಮರ್ಥರಾದರೆ ಅಂಥವರಿಗೆ ಧನ ಸಹಾಯ ಮಂಜೂರು ಮಾಡಲು ಸರ್ಕಾರದ ಅನುಮೋದನೆಯನ್ನು ಪ್ರತಿಯೊಂದು ಅರ್ಜಿದಾರರ ವಿಷಯದ ಅರ್ಹತೆಗನುಗುಣವಾಗಿ ಪಡೆಯಬೇಕಾಗುತ್ತದೆ.

ಅರ್ಜಿದಾರರು ಕುಸ್ತಿಯಲ್ಲಿ ತೊಡಗಿದ್ದಾಗ ಅಂಗವಿಕಲತೆ ಹೊಂದಿದ್ದಲ್ಲಿ ದಾಖಲೆ ಆಧಾರಗಳ ಮೇಲೆ ಸಡಿಲಗೊಳಿಸಲಾಗುವುದು. ಧನ ಸಹಾಯವನ್ನು ಪಡೆಯಲು ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು ಅಥವಾ 20 ವರ್ಷ ಮೇಲ್ಪಟ್ಟು ವಾಸಿಸುತ್ತಿರುವವರಿಗೆ ಮಾತ್ರ ನೀಡಲಾಗುವುದು. ವಾಸದ ಬಗ್ಗೆ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶಿಲ್ದಾರರಿಂದ ಪಡೆದಿರಬೇಕು.

ಅರ್ಜಿದಾರರ ವಾರ್ಷಿಕ ಆದಾಯ ಎಲ್ಲಾ ಮೂಲಗಳು ಸೇರಿ ರೂ.50,000 ಗಳು ಮೀರಿರಬಾರದು. ಆದಾಯ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶಿಲ್ದಾರರು ನೀಡಿರಬೇಕು. ವೃದ್ದಾಪ್ಯ ವೇತನ ಪಡೆಯುತ್ತಿದ್ದರೆ ಅರ್ಜಿದಾರರ ವಾರ್ಷಿಕ ಆದಾಯಕ್ಕೆ ಇದನ್ನೂ ಲೆಕ್ಕ ಹಾಕಬಹುದು. ಮಾಶಾಸನದಾರರು ಇತರೆ ಬೇರೆ ಯಾವುದೇ ಇಂತಹ ಧನ ಸಹಾಯ ಪಡೆಯುತ್ತಿರಬಾರದು. ಧನ ಸಹಾಯಕ್ಕಾಗಿ ನಿಗಧಿತ ಅರ್ಜಿಯನ್ನು ತುಂಬಿ, ಪಾಸ್ ಪೋರ್ಟ್ ಅಳತೆಯ ಪೋಟೋ ಅರ್ಜಿಗೆ ಲಗತ್ತಿಸಿ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿರಬೇಕು. ಅರ್ಜಿದಾರರು ಅವರ ಕ್ರೀಡಾ ಕ್ಷೇತ್ರದಲ್ಲಿ ನಿಜವಾಗಿಯೂ ನಿಪುಣರಾಗಿರುವ ಬಗ್ಗೆ ಕ್ರೀಡಾ ಪ್ರಮಾಣ ಪತ್ರಗಳ ನೈಜತೆಯಿಂದ ಕೂಡಿರಬೇಕು. ಪೋಸ್ಟರ್, ಬ್ಯಾನರ್, ಹ್ಯಾಂಡ್ ಬಿಲ್ ಮತ್ತು ಆಮಂತ್ರಣ ಪತ್ರಿಕೆಗಳನ್ನು ಪರಿಗಣಿಸುವುದಿಲ್ಲ.

ಅರ್ಜಿದಾರರು ಕ್ರೀಡಾಪಟುವಾಗಿ ತಮ್ಮ 40ವರ್ಷ ವಯಸ್ಸಿನೊಳಗಿನ ಕ್ರೀಡಾ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುವುದು. ಹಿರಿಯರ (ವೆಟರನ್ಸ್) ಕ್ರೀಡಾಕೂಟದಲ್ಲಿ ಭಾಗವಹಿಸಿದವರು ಮಾಸಾಶನಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅರ್ಜಿದಾರರು ಸತ್ಯಾಂಶಗಳನ್ನು ಮರೆಮಾಚಿರುವುದು ಆನಂತರ ಕಂಡುಬ0ದಲ್ಲಿ ಅಥವಾ ಗೊತ್ತಾದಲ್ಲಿ ಅಂತಹ ಮಾಸಾಶನವನ್ನು ರದ್ದುಗೊಳಿಸುವುದರ ಜೊತೆಗೆ ಅವರಿಗೆ ಕೊಟ್ಟ ಧನ ಸಹಾಯ(ಮಾಶಾಸನ)ವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ಕಛೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಡಿಸೆಂಬರ್ 31 ರೊಳಗಾಗಿ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಅಥವಾ ಜಿಲ್ಲಾ ಕ್ರೀಡಾಂಗಣ ಕಛೇರಿ ದೂರವಾಣಿ ಸಂಖ್ಯೆ: 08539-230120ಗೆ ಸಂಪರ್ಕಿಸಬಹುದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande