
ಕೊಪ್ಪಳ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪೌಲ್ಟ್ರಿ ಫೀಡ್, ಕೋಳಿ ಫಾರಂಗಳ ಮೂಲಕ ರೈತರ ಮೇಕ್ಕೆಜೋಳ ಖರೀದಿಸಲು ಜಿಲ್ಲೆಯ ಪ್ರತಿ ಕೋಳಿ ಫಾರಂಗಳ ಬೇಡಿಕೆಯಂತೆ ಮೆಕ್ಕೆಜೋಳವನ್ನು ಪೂರೈಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2025-26ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳದ ಖರೀದಿಯ ಕುರಿತು ಕೊಪ್ಪಳ ಜಿಲ್ಲಾ ಕೋಳಿ ಫಾರಂ ಮಾಲೀಕರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸರ್ಕಾರದ ಆದೇಶದಂತೆ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಪ್ರತಿ ರೈತರಿಂದ 50 ಕ್ವಿಂಟಾಲ್ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಾಲ್‍ಗೆ 2400 ರೂ.ಗಳಂತೆ ಸರ್ಕಾರದ ನಿಯಮಗಳನ್ವಯ ಖರೀದಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ, ನಿಯಮಿತ ರವರ ಮೂಲಕ ಖರೀದಿಸಬೇಕಾಗಿದೆ ಎಂದರು.
ಕೋಳಿ ಫಾರಂಗಳ ಆಹಾರ ತಯಾರಿಕೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೆಕ್ಕೆ ಜೋಳವನ್ನು ಬಳಸಲಾಗುತ್ತದೆ. ಹಾಗಾಗಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಮಿನಲ್ಲಿ ಕೊಪ್ಪಳ ಜಿಲ್ಲೆಯ ರೈತರು ಬೆಳೆದ ಮೆಕ್ಕೆಜೋಳವನ್ನು ಜಿಲ್ಲೆಯ ಕೋಳಿ ಫಾರ್ಮ್ ಮಾಲೀಕರಿಗೆ ಪೂರೈಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಕೋಳಿ ಫಾರಂಗಳಿಗೆ ಅವಶ್ಯವಿರುವ ಒಟ್ಟಾರೆ ಬೇಡಿಕೆಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಹೇಳಿದರು.
ಕೋಳಿ ಫಾರಂ ಮಾಲೀಕರ ಪ್ರತಿನಿಧಿಗಳು ಮಾತನಾಡಿ, ಒಟ್ಟಾರೆ 3000 ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವುದಾಗಿ ಸಭೆಯಲ್ಲಿ ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಡಿ ಕೃಷ್ಣಮೂರ್ತಿ ಅವರು ಮಾತನಾಡಿ, 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,62,000 ಹೆಕ್ಟರ್ ವಿಸ್ತೀರ್ಣದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, 3,24,878 ಮೆಟ್ರಿಕ್ ಟನ್ನ್‍ನಷ್ಟು ಮೆಕ್ಕೆಜೋಳ ಇಳುವರಿ ಬಂದಿರುವುದಾಗಿ. ಇದರಲ್ಲಿ ಅಂದಾಜು 1,72,186 ಮೆಟ್ರಿಕ್ ಟನ್ ನಷ್ಟು ಮೆಕ್ಕೆಜೋಳವನ್ನು ರೈತರು ಮಾರಾಟ ಮಾಡಿರುತ್ತಾರೆ. ಅಂದಾಜು 1,52,692 ಮೆಟ್ರಿಕ್ ಟನ್ ಮೆಕ್ಕೆಜೋಳ ರೈತರ ಬಳಿ ಇರುವ ಸಾದ್ಯತೆಯಿದೆ ಎಂದು ತಿಳಿಸಿದರು.
ಕೊಪ್ಪಳ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ವಿ.ಜಿ. ಹಿರೇಮಠ ಅವರು ಮಾತನಾಡಿ, ಜಿಲ್ಲೆಯಲ್ಲಿ ಬೆಳೆಯಲಾದ ಮೆಕ್ಕೆಜೋಳದ ಪ್ರಮಾಣದಲ್ಲಿ ಈಗಾಗಲೇ 1,72,186.20 ಮೆಟ್ರಿಕ್ ಟನ್ ನಷ್ಟು ಮೆಕ್ಕೆಜೋಳವನ್ನು ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಮಾರಾಟ ಮಾಡಿರುತ್ತಾರೆ ಎಂದು ಮಾಹಿತಿ ನೀಡಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ 27 ವಾಣಿಜ್ಯ ಮೊಟ್ಟೆ ಕೋಳಿ ಫಾರಂಗಳಿದ್ದು, ಕೋಳಿ ಫಾರಂಗಳಲ್ಲಿರುವ ಕುಕ್ಕಟಗಳ ಅಂಕಿ-ಅಂಶಗಳ ಅನುಗುಣವಾಗಿ ಕೋಳಿ ಆಹಾರಗಳ ತಯಾರಿಕೆಗಾಗಿ ಅವಶ್ಯವಿರುವ ಮೆಕ್ಕೆಜೋಳವನ್ನು ಸರ್ಕಾರದ ನಿಯಮಗಳನ್ವಯ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳವನ್ನು ಖರೀದಿಸಲು ಕೋಳಿ ಫಾರಂಗಳ ಮಾಲೀಕರಿಂದ ಬೇಡಿಕೆಯನ್ನು ಪಡೆದು ಕ್ರಮವಹಿಸುವ ಉದ್ದೇಶದಿಂದ ಈ ಸಭೆಗೆ ಜಿಲ್ಲೆಯ ಕೋಳಿ ಫಾರಂ ಮಾಲಿಕರನ್ನು ಕರೆಯಲಾಗಿದೆ. ಈ ಉದ್ದೇಶದಂತೆ ಪೌಲ್ಟ್ರಿ ಫೀಡ್, ಕೋಳಿ ಫಾರಂಗಳ ಮೂಲಕ ಮೇಕ್ಕೆಜೋಳ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಇಲಾಖೆಗಳ ಅಧಿಕಾರಿಗಳು, ಕೋಳಿ ಫಾರಂ ಮಾಲೀಕರ ಪ್ರತಿನಿಧಿಗಳು ಮತ್ತು ಪಶು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್