ರೈತರಿಗೆ ಬಹುಬೆಳೆ ಪದ್ಧತಿಯ ಮಾಹಿತಿ ನೀಡಿರಿ
ಬಳ್ಳಾರಿ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲೆಯಲ್ಲಿ ರೈತರ ಆದಾಯ ಹೆಚ್ಚಿಸಲು ವಿಜ್ಞಾನಿಗಳು ಬಹುಬೆಳೆ ಪದ್ಧತಿಯ ತರಬೇತಿಯನ್ನು ಆಯೋಜಿಸಿ, ರೈತರಿಗೆ ಮಾಹಿತಿ ನೀಡಬೇಕು ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಹನುಮಂತಪ್ಪ ಅವರು ತಿಳಿಸಿದ್ದಾರೆ.
ರೈತರಿಗೆ ಬಹುಬೆಳೆ ಪದ್ಧತಿಯ ಮಾಹಿತಿ ನೀಡಿರಿ


ಬಳ್ಳಾರಿ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ರೈತರ ಆದಾಯ ಹೆಚ್ಚಿಸಲು ವಿಜ್ಞಾನಿಗಳು ಬಹುಬೆಳೆ ಪದ್ಧತಿಯ ತರಬೇತಿಯನ್ನು ಆಯೋಜಿಸಿ, ರೈತರಿಗೆ ಮಾಹಿತಿ ನೀಡಬೇಕು ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಹನುಮಂತಪ್ಪ ಅವರು ತಿಳಿಸಿದ್ದಾರೆ.

ಬಳ್ಳಾರಿ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ 25ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನಿಗಳು ಸ್ಥಳೀಯವಾಗಿ ಅಗತ್ಯವಿರುವ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅದರ ಆಧಾರದ ಮೇಲೆ ಮುಂದಿನ ವರ್ಷದ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎ.ಆರ್. ಕುರುಬರ್ ಅವರು, ಪ್ರಯೋಗಾಲಯದ ಸಂಶೋಧನೆಗಳನ್ನು ಹೊಲಗದ್ದೆಗಳಿಗೆ ತಲುಪಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಒತ್ತಿ ಹೇಳಿದರು.

ಬಳ್ಳಾರಿ ಭಾಗದ ರೈತರ ಆದಾಯ ಹೆಚ್ಚಿಸಲು ವಿಜ್ಞಾನಿಗಳು ರೈತರ ಹೊಲದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್ ಅವರು, ಬಳ್ಳಾರಿ ಜಿಲ್ಲೆಯಲ್ಲಿ 1.13 ಲಕ್ಷ ಹೆಕ್ಟೇರ್ ಪ್ರದೇಶವು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡುತ್ತದೆ. ಇಲ್ಲಿನ ರೈತರು ನಿಯಮಿತವಾಗಿ ಕೇವಲ ಭತ್ತವನ್ನು ಮಾತ್ರ ಬೆಳೆಯುತ್ತಿದ್ದಾರೆ. ಪ್ರಸ್ತುತದಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಈ ಗಂಭೀರ ಪರಿಸ್ಥಿತಿಯಲ್ಲಿ, ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದರು.

ಬಳ್ಳಾರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಪಾಲಯ್ಯ ಪಿ. ಅವರು, ಪ್ರಸ್ತುತ ವರ್ಷದಲ್ಲಿ ಕೈಗೊಂಡ ಕಾರ್ಯಕ್ರಮಗಳÀ ವರದಿ ಮತ್ತು 2024-25ರ ಕೃಷಿ ವಿಜ್ಞಾನ ಕೇಂದ್ರದ ಚಟುವಟಿಕೆಗಳನ್ನು ಮಂಡಿಸಿದರು.

ಗೃಹ ವಿಜ್ಞಾನಿ ಡಾ.ರಾಜೇಶ್ವರಿ ಅವರು ಗಣ್ಯರನ್ನು ಸ್ವಾಗತಿಸಿದರು. ಮಣ್ಣು ವಿಜ್ಞಾನಿ ಡಾ.ರವಿ ಎಸ್. ಅವರು ವಂದಿಸಿದರು.

ಸಭೆಯಲ್ಲಿ ಹಗರಿ ಕೃಷಿ ಕಾಲೇಜಿನ ಪ್ರಭಾರ ಅಧಿಕಾರಿ ಡಾ.ರವಿ ಶಂಕರ್, ಪಶು ವೈದ್ಯಕೀಯ ಪ್ರಾಧ್ಯಾಪಕ ಡಾ.ರಮೇಶ್, ರಾಯಚೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಸಹ ಸಂಶೋಧಕ ಡಾ.ಜಯಪ್ರಕಾಶ್ ನಿಡುಗುಂದಿ, ನಬಾರ್ಡ್ ಅಧಿಕಾರಿ ಯುವರಾಜ್ ಸೇರಿದಂತೆ ತೋಟಗಾರಿಕೆ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗಳ ಅಧಿಕಾರಿಗಳು, ಸಭೆಯ ಸದಸ್ಯರು ಹಾಗೂ ಪ್ರಗತಿಪರ ರೈತರಾದ ಸಮುದ್ರರಾಜ್, ರವಿಕುಮಾರ್ ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು, ರೈತರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande