

ಬೆಳಗಾವಿ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬೆಳಗಾವಿ ಸುವರ್ಣ ಸೌಧದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೈನುಗಾರಿಕೆ ದುರ್ಬಲವಾಗಿರುವುದೇ ತಲಾ ಆದಾಯ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದರು.
2023–24ರ ತಲಾ ಆದಾಯದ ಜಿಲ್ಲಾವಾರು ಅಂಕಿಅಂಶಗಳನ್ನು ಸದನದ ಮುಂದೆ ಮಂಡಿಸಿದ ಅವರು, ಕಲಬುರಗಿ ಜಿಲ್ಲೆಯ ತಲಾ ಆದಾಯ ರಾಜ್ಯದಲ್ಲೇ ಅತಿ ಕಡಿಮೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ವಿಷಯವಾಗಿ 39 ಸದಸ್ಯರು 17 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದನ್ನು ಸ್ಮರಿಸಿದ ಮುಖ್ಯಮಂತ್ರಿ, ದೀರ್ಘ ಚರ್ಚೆಗೆ ಸರ್ಕಾರ ಸದಾ ತೆರೆದಿದೆ ಎಂದರು.
ಅಭಿವೃದ್ಧಿಗೆ ಅನುದಾನ ಮಾತ್ರ ಸಾಲದು; ಅನುಷ್ಠಾನ, ಬಳಕೆ, ಜನಮನೋಭಾವ ಬದಲಾವಣೆ ಮುಖ್ಯ ಎಂದು ನಂಜುಂಡಪ್ಪ ವರದಿಯ ಆಶಯಗಳನ್ನು ಉಲ್ಲೇಖಿಸಿದರು. ವರದಿಯ ಬಳಿಕ ನೀಡಲಾದ ಅನುದಾನಗಳ ಪರಿಣಾಮಕಾರಿತ್ವ ಕುರಿತು ಅಧ್ಯಯನ–ಸಮೀಕ್ಷೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದರು.
ತಲಾ ಆದಾಯದ ಚಿತ್ರಣ:
ರಾಜ್ಯದ ಸರಾಸರಿ ತಲಾ ಆದಾಯ ₹3.39 ಲಕ್ಷ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 6 ಜಿಲ್ಲೆಗಳು ₹3.4 ಲಕ್ಷಕ್ಕೂ ಮೇಲಿದೆ. 11 ಜಿಲ್ಲೆಗಳು ₹2 ಲಕ್ಷಕ್ಕಿಂತ ಕಡಿಮೆ ತಲಾ ಆದಾಯ ಹೊಂದಿದ್ದು, ಇದರಲ್ಲಿ ಉತ್ತರ ಕರ್ನಾಟಕದ 10 ಜಿಲ್ಲೆಗಳು ಹಾಗೂ ಚಿತ್ರದುರ್ಗ ಸೇರಿವೆ.
ಹೈನುಗಾರಿಕೆ ಅಸಮಾನತೆ:
ಬೆಂಗಳೂರು ಮಿಲ್ಕ್ ಯೂನಿಯನ್ ದಿನಕ್ಕೆ 17.13 ಲಕ್ಷ ಕೆಜಿ ಹಾಲು ಸಂಗ್ರಹಿಸುವಾಗ, ಕಲಬುರಗಿ ಮಿಲ್ಕ್ ಯೂನಿಯನ್ ಕೇವಲ 67 ಸಾವಿರ ಕೆಜಿ ಮಾತ್ರ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ರಾಜ್ಯದ ಜನಸಂಖ್ಯೆಯ ಶೇ.42 ವಾಸಿಸುತ್ತಿದ್ದರೂ, ದಿನದ ಸರಾಸರಿ ಹಾಲು ಸಂಗ್ರಹ 10.45 ಲಕ್ಷ ಲೀಟರ್ ಮಾತ್ರ; ಉಳಿದ ಜಿಲ್ಲೆಗಳು ಸುಮಾರು 1 ಕೋಟಿ ಲೀಟರ್ ಸಂಗ್ರಹಿಸುತ್ತಿವೆ. ಈ ಅಸಮಾನತೆ ನಿವಾರಣೆಗೆ 2025ರ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಹೈನುಗಾರಿಕೆಗೆ ಹೆಚ್ಚುವರಿ ಆದ್ಯತೆ ನೀಡಲಾಗಿದೆ.
ಪ್ರೋತ್ಸಾಹಧನ ಮತ್ತು ಯೋಜನೆಗಳು:
ಹಾಲಿನ ಪ್ರೋತ್ಸಾಹಧನ ಕುರಿತು ಟೀಕೆಗೆ ಉತ್ತರಿಸಿದ ಸಿಎಂ, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ಬಾರಿ ದರ ಹೆಚ್ಚಿಸಿ ಒಟ್ಟು ₹7 ಮಾಡಲಾಗಿದೆ, ಬಿಜೆಪಿ ಅವಧಿಯ ₹630 ಕೋಟಿ ಬಾಕಿ ಪಾವತಿಸಲಾಗಿದೆ ಎಂದರು.
2023–26ರಲ್ಲಿ ₹4,048 ಕೋಟಿ ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ.
ಅನುಗ್ರಹ ಯೋಜನೆ ಪುನರುಜ್ಜೀವನಗೊಳಿಸಿ ಕುರಿ/ಮೇಕೆಗೆ ಪರಿಹಾರವನ್ನು ₹7,500ಕ್ಕೆ, ದೊಡ್ಡ ಜಾನುವಾರುಗಳಿಗೆ ₹15,000ಕ್ಕೆ ಹೆಚ್ಚಿಸಲಾಗಿದೆ. ಅಲೆಮಾರಿ ಕುರಿಗಾರರ ಸಂರಕ್ಷಣೆಗೆ ಕಾಯ್ದೆಯನ್ನೂ ಜಾರಿಗೊಳಿಸಲಾಗಿದೆ.
ಉದ್ಯೋಗ–ಶಿಕ್ಷಣ:
ಉತ್ತರ ಕರ್ನಾಟಕದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಐಟಿಐ, ಪಾಲಿಟೆಕ್ನಿಕ್, ಜಿಟಿಟಿಸಿಗಳ ವಿಸ್ತರಣೆ ನಡೆಯುತ್ತಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಯೇ ಸರ್ಕಾರದ ಆದ್ಯತೆ ಎಂದು ಮುಖ್ಯಮಂತ್ರಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa