
ಹಂಪಿ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹಂಪಿಯ ಮತಂಗ ಪರ್ವತವು ನಮ್ಮ ಸಂಸ್ಕೃತಿಗೆ ಆಳವಾದ ಸಂಕೇತ, ಪೌರಾಣಿಕವಾಗಿ, ಇದು ಮತಂಗ ಋಷಿಗಳ ತಪೋಭೂಮಿ ಎಂದು ಹೇಳಲಾಗುತ್ತದೆ ಎಂದು ಡಾ. ಆರ್. ಎಸ್. ನಂದಕುಮಾರ್ ಅವರು ಹೇಳಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಭಾರತೀಯ ಸಾಮಾಜಿಕ ಸಾಂಸ್ಕೃತಿಕ ಅಕಾಡೆಮಿಯ ಹುಮನಾಬಾದ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಾ ಕಲಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಾರ್ಮೋನಿಯಂ ನುಡಿಸಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯವು ಸಂಗೀತ-ಕಲೆಯ ಸ್ವರ್ಣಯುಗ. ವಿಜಯನಗರ ಸಾಮ್ರಾಜ್ಯವು ಸಂಗೀತ, ನೃತ್ಯ, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಕಲೆಯ ಕೇಂದ್ರವಾಗಿತ್ತು. ವಿಜಯನಗರದ ಅರಸರು ಕಲಾವಿದರ ಮಹಾಪೋಷಕರು, ಇದು ಕರ್ನಾಟಕ ಸಂಗೀತದ ವ್ಯವಸ್ಥಿತ ಬೆಳವಣಿಗೆಗೆ ಭೂಮಿಕೆಯಾಗಿತ್ತು ಎಂದು ತಿಳಿಸಿದರು.
ಕಾರ್ಯಾಗಾರದ ಮುಖ್ಯ ಅತಿಥಿಗಳಾದ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಕಾಂತಂ ನಾಗೇಂದ್ರಶಾಸ್ತ್ರಿ ಅವರು ಮಾತನಾಡುತ್ತಾ, ಸಂಗೀತ ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ತಾತಾ ಲಕ್ಷ್ಮೀ ನರಸಪ್ಪನವರು ವಿಜಯನಗರ ಹಂಪಿಯಲ್ಲಿ ಆಸ್ಥಾನದ ಸಂಗೀತ ಕಲಾವಿದರಾಗಿದ್ದರು. ಇಂತಹ ಭೂಮಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗವು ಸಂಗೀತ ವಿದ್ಯಾರ್ಥಿಗಳಿಗೆ ತವರು ಮನೆಯಾಗಿದೆ ಎಂದರು.
ಈ ಕಾರ್ಯಾಗಾರದಲ್ಲಿ ವಿದೇಶಿ ವಿದ್ವಾಂಸರಾದ ಇಟಲಿ ವೆನಿಸ್ ವಿಶ್ವವಿದ್ಯಾಲಯದ ಡಾ. ರಿಖೋ ಜೂಡಿಸ್ ಅವರು ಮಾತನಾಡುತ್ತಾ, ಭಾರತವು ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿ ಮಹತ್ವ ನೀಡುವ ದೇಶ. ಇಲ್ಲಿ ನಾನು ಬಂದು ಭಾಗವಹಿಸುವುದೇ ಅದೃಷ್ಟ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಮಾತನಾಡುತ್ತ, ವಿಜಯನಗರದ ಆಡಳಿತ ಕಾಲದ ದ್ರಾವಿಡ ನಾಡು ನಮ್ಮದು, ಇಲ್ಲಿ ಸಂಗೀತ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಗಳಿಗೆ ಹೆಚ್ಚಿನ ಮಹತ್ವ ನೀಡಲಾಯಿತು ಎಂದು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಮಾತನಾಡುತ್ತಾ, ಮಾತು ಅರ್ಥ ಹಾಗೂ ಭಾವ ಸೇರಿ ಸಂಗೀತದ ಆಸ್ವಾದನೆ ಮಾಡಲಾಗಿದೆ. ಇಂತಹ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಾ. ಆರ್.ಎಸ್. ನಂದಕುಮಾರ ಅವರ ಸಂಗೀತದ ವಿಶ್ವಕೋಶವನ್ನು ಬರೆದುಕೊಟ್ಟರೆ ಅದನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ವಿದ್ಯಾರ್ಥಿಗಳಿಗೆ ಹಿರಿಯ ವಿದ್ವಾಂಸರನ್ನು ಪರಿಚಯ ಮಾಡಿಕೊಡುವ ಮೂಲಕ ಸ್ವರ, ಲಯ, ಸಂಗೀತ, ಸಾಹಿತ್ಯ, ಕಲೆಯಲ್ಲಿರುವ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕರಾದ ಡಾ. ಮಾಧವ ಪೆರಾಜೆ ಅವರು ಗಣ್ಯರನ್ನು ಸ್ವಾಗತಿಸಿದರು, ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪ್ರಾರ್ಥಿಸಿದರು. ಡಾ.ಅಂಬಿಕಾಶಾಸ್ತ್ರೀ ಎನ್.ಎ ನಿರೂಪಿಸಿದರು, ವಿವಿಧ ನಿಕಾಯದ ಡೀನರು, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ಸಿಬ್ಬಂದಿ, ಸಂಗೀತಾಸಕ್ತರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್