ಚಿನ್ನ ಕಳ್ಳ ಸಾಗಣೆ ಪ್ರಕರಣ ; ಕಾಫಿಪೋಸಾ ಅಡಿ ನಟಿ ರನ್ಯಾ ರಾವ್ ಬಂಧನ ಮಾನ್ಯ
ಬೆಂಗಳೂರು, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಗಳಾಗಿ ಬಂಧಿತರಾಗಿರುವ ನಟಿ ಹರ್ಷವರ್ಧಿನಿ ಅಲಿಯಾಸ್‌ ರನ್ಯಾ ರಾವ್‌, ತರುಣ್‌ ಕೊಂಡೂರು ರಾಜು ಮತ್ತು ಸಾಹಿಲ್‌ ಜೈನ್‌ ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ (ಕಾಫ
Ranya  rao


ಬೆಂಗಳೂರು, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಗಳಾಗಿ ಬಂಧಿತರಾಗಿರುವ ನಟಿ ಹರ್ಷವರ್ಧಿನಿ ಅಲಿಯಾಸ್‌ ರನ್ಯಾ ರಾವ್‌, ತರುಣ್‌ ಕೊಂಡೂರು ರಾಜು ಮತ್ತು ಸಾಹಿಲ್‌ ಜೈನ್‌ ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ (ಕಾಫಿಪೋಸಾ) ಅಡಿ ಬಂಧಿಸಿರುವ ಕೇಂದ್ರ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಎತ್ತಿ ಹಿಡಿದಿದೆ. ಇದರೊಂದಿಗೆ ರನ್ಯಾ ಸೇರಿದಂತೆ ಇತರೆ ಆರೋಪಿಗಳು ಜೈಲಲ್ಲೇ ಇರಬೇಕಾಗಿದೆ.

ಕಾಫಿಪೋಸಾ ಕಾಯಿದೆ ಅಡಿ ರನ್ಯಾ ಬಂಧನ ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಡಿಸೆಂಬರ್‌ 1ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ವಿಭಾಗೀಯ ಪೀಠ ಇಂದು ಪ್ರಕಟಿಸಿತು.

ರನ್ಯಾ ಮಲತಾಯಿ ಎಚ್‌.ಎಸ್‌. ರೋಹಿಣಿ, ತರುಣ್‌ ತಾಯಿ ರಮಾ ರಾಜು ಹಾಗೂ ಸಾಹಿಲ್‌ ಜೈನ್‌ ತಾಯಿ ಪ್ರಿಯಾಂಕಾ ಸರ್ಕಾರಿಯಾ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ವಿಸ್ತೃತ ಆದೇಶ ಇನ್ನೂ ಪ್ರಕಟವಾಗಬೇಕಿದೆ.

ಕೇಂದ್ರದ ವಾದ

ವಿಚಾರಣೆಯ ವೇಳೆ ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ. ಅರವಿಂದ್‌ ಕಾಮತ್‌ ಅವರು, “ರನ್ಯಾಗೆ ಪ್ರಕರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ ಒದಗಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗಿದೆ. ಜೈಲು ಕೈಪಿಡಿಯ ಪ್ರಕಾರ ಡಿಜಿಟಲ್‌ ಸಾಧನ ನೀಡಲು ಅವಕಾಶವಿರಲಿಲ್ಲ. ಆದ್ದರಿಂದ ಅವರು ಸೂಚಿಸಿದಂತೆ ವಕೀಲರಿಗೆ ನೀಡಲು ಯತ್ನಿಸಲಾಯಿತು ಆದರೆ ಅವರು ಸ್ವೀಕರಿಸದ ಕಾರಣ, ಅಂತಿಮವಾಗಿ ರನ್ಯಾ ಸೂಚನೆಯ ಮೇರೆಗೆ ಅವರ ಮಲತಾಯಿ ರೋಹಿಣಿಗೆ ನೀಡಲಾಗಿದೆ. ಚಿನ್ನ ಕಳ್ಳ ಸಾಗಣೆಯಂತಹ ಗಂಭೀರ ಕೃತ್ಯದಲ್ಲಿ ಭಾಗಿಯಾಗಿರುವುದರಿಂದ ಆರೋಪಿಗಳನ್ನು ಬಿಡುಗಡೆ ಮಾಡಬಾರದು. ದಾಖಲೆಗಳ ಕುರಿತು ಮಾಡಿರುವ ಆರೋಪಗಳು ಸಮಂಜಸವಲ್ಲ” ಎಂದು ಸಮರ್ಥಿಸಿದರು.

ಆರೋಪಿಗಳ ಪರ ವಾದ

ರನ್ಯಾ ಪರವಾಗಿ ಹಿರಿಯ ವಕೀಲ ಕಿರಣ್‌ ಜವಳಿ ವಾದಿಸಿ, ಬಂಧನ ಆದೇಶಕ್ಕೆ ಆಧಾರವಾಗಿರುವ ಡಿಆರ್‌ಐ ಪೆನ್‌ಡ್ರೈವ್‌ (ವಿಮಾನ ನಿಲ್ದಾಣದ ವಿಡಿಯೊ ದಾಖಲೆ) ರನ್ಯಾಗೆ ನೀಡಿಲ್ಲ. ಪಾಸ್‌ಪೋರ್ಟ್‌ ಈಗಾಗಲೇ ಜಫ್ತಿ ಆಗಿರುವುದರಿಂದ ದೇಶ ತೊರೆಯುವ ಸಾಧ್ಯತೆ ಇಲ್ಲ ಎಂದರು. ಜೊತೆಗೆ, ಆರೋಪಿಗೆ ಅರ್ಥವಾಗುವ ಭಾಷೆಯಲ್ಲಿ ಸಂಪೂರ್ಣ ದಾಖಲೆ ನೀಡಬೇಕೆಂಬ ಸಂವಿಧಾನಾತ್ಮಕ ಹಕ್ಕು ಉಲ್ಲಂಘನೆಯಾಗಿದೆ. ಇದರಿಂದ ಸಂವಿಧಾನದ 22(5)ನೇ ವಿಧಿಯಡಿ ಪರಿಣಾಮಕಾರಿಯಾದ ಮನವಿ ಸಲ್ಲಿಸಲು ಅಸಾಧ್ಯವಾಗಿದೆ ಎಂದು ವಾದಿಸಿದರು.

ತರುಣ್‌ ರಾಜು ಪರವಾಗಿ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು, ಕಾಫಿಪೋಸಾ ಅಡಿ ಬಂಧನವೇ ಅಕ್ರಮ ಎಂದು ಕೇಂದ್ರಕ್ಕೆ ಸಲ್ಲಿಸಿದ ಮನವಿಗಳನ್ನು ಸರಿಯಾಗಿ ಪರಿಗಣಿಸಿಲ್ಲ. ಜಂಟಿ ಕಾರ್ಯದರ್ಶಿಯು ಕೇವಲ ಸಲಹಾ ಮಂಡಳಿಗೆ ರವಾನಿಸುವ ಪೋಸ್ಟ್‌ಮ್ಯಾನ್‌ ರೀತಿಯಲ್ಲಿ ನಡೆದುಕೊಂಡಿದ್ದಾರೆ. ದುಬೈನಲ್ಲಿ ನಡೆದ ವ್ಯವಹಾರಗಳಿಗೆ ಭಾರತದಲ್ಲಿ ಹೊಣೆ ಮಾಡಲಾಗದು ಎಂದು ಹೇಳಿದರು.

ಬಂಧನ ಪ್ರಕ್ರಿಯೆ

ಕೇಂದ್ರ ಸರ್ಕಾರದ ಹಣಕಾಸು–ಕಂದಾಯ ಇಲಾಖೆ ಹಾಗೂ ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿಯವರು ಏಪ್ರಿಲ್‌ 22ರಂದು ಕಾಫಿಪೋಸಾ ಅಡಿ ಮೂವರು ಆರೋಪಿಗಳನ್ನು ಡಿಆರ್‌ಐ ವಶಕ್ಕೆ ಪಡೆದಿದ್ದರು. ಈ ಬಂಧನದ ವಿರುದ್ಧ ಸಲ್ಲಿಸಿದ್ದ ಮನವಿಗಳನ್ನು ಜೂನ್‌ 19ರಂದು ನಡೆದ ಸಲಹಾ ಮಂಡಳಿ ಸಭೆಯಲ್ಲಿ ಚರ್ಚಿಸಿ, ಜುಲೈ 2ರಂದು ವರದಿ ನೀಡಲಾಗಿತ್ತು. ಬಳಿಕ ಜುಲೈ 16ರಂದು ಬಂಧನವನ್ನು ಖಾತರಿಪಡಿಸುವ ಆದೇಶ ಹೊರಡಿಸಲಾಗಿತ್ತು.

ಪ್ರಕರಣದ ಹಿನ್ನೆಲೆ

ಮಾರ್ಚ್‌ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು, ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕಿಲೋಗ್ರಾಂ ಚಿನ್ನವನ್ನು ಜಫ್ತಿ ಮಾಡಿದ್ದರು. ಕಸ್ಟಮ್ಸ್‌ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಚಿನ್ನವನ್ನು ಬೆಲ್ಟ್‌ ಹಾಗೂ ಜಾಕೆಟ್‌ಗಳಲ್ಲಿ ಅಡಗಿಸಿಕೊಂಡು ತರಲಾಗುತ್ತಿತ್ತು ಎನ್ನಲಾಗಿದೆ. ರಾಜ್ಯದ ಡಿಜಿಪಿ ಶ್ರೇಣಿ ಅಧಿಕಾರಿಯೊಬ್ಬರ ಸಾಕು ಮಗಳಾದ ರನ್ಯಾ, ಅತಿ ಗಣ್ಯರಿಗೆ ಮೀಸಲಾದ ಮಾರ್ಗದ ಮೂಲಕ ವಿಮಾನ ನಿಲ್ದಾಣದಿಂದ ನಿರ್ಬಂಧವಿಲ್ಲದೆ ಹೊರಬರುತ್ತಿದ್ದರು ಎಂಬ ಆರೋಪವೂ ಪ್ರಕರಣದಲ್ಲಿ ಕೇಳಿ ಬಂದಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande