
ನವದೆಹಲಿ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗೋವಾ ವಿಮೋಚನಾ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ಮುಕ್ತಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ ಮತ್ತು ತ್ಯಾಗಕ್ಕೆ ನಮನ ಸಲ್ಲಿಸಿದರು. ಜೊತೆಗೆ ಗೋವಾದ ಜನತೆಗೆ ಶುಭಾಶಯಗಳನ್ನು ತಿಳಿಸಿ ಉಜ್ವಲ ಮತ್ತು ಸಮೃದ್ಧ ಭವಿಷ್ಯವನ್ನು ಹಾರೈಸಿದರು.
ರಾಷ್ಟ್ರಪತಿ ಮುರ್ಮು ಅವರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ, ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡಿದ ವೀರರನ್ನೂ ಹಾಗೂ ಸಶಸ್ತ್ರ ಪಡೆಗಳ ಸಮರ್ಪಣೆಯನ್ನೂ ಕೃತಜ್ಞತೆಯಿಂದ ಸ್ಮರಿಸಿದರು.
ಪ್ರಧಾನಿ ಮೋದಿ ಅವರು, ಗೋವಾ ವಿಮೋಚನೆ ದೇಶದ ರಾಷ್ಟ್ರೀಯ ಪಯಣದ ಮಹತ್ವದ ಅಧ್ಯಾಯವಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಅದಮ್ಯ ಧೈರ್ಯ ಗೋವಾದ ಸರ್ವತೋಮುಖ ಅಭಿವೃದ್ಧಿಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 1961ರ ಮೊದಲು ಗೋವಾಕ್ಕೆ ಭೇಟಿ ನೀಡಲು ಭಾರತೀಯರಿಗೆ ಅನುಮತಿ ಅಗತ್ಯವಿತ್ತು ಎಂದು ನೆನಪಿಸಿ, ಗೋವಾ ವಿಮೋಚನೆಗಾಗಿ ಹೋರಾಡಿದ ಅನೇಕ ಮಹಾನ್ ದೇಶಭಕ್ತರನ್ನು ಸ್ಮರಿಸಿದ್ದಾರೆ.
ಗೋವಾ ವಿಮೋಚನಾ ದಿನವನ್ನು ಪ್ರತಿ ವರ್ಷ ಡಿಸೆಂಬರ್ 19ರಂದು ಆಚರಿಸಲಾಗುತ್ತದೆ. 1961ರಲ್ಲಿ ಈ ದಿನದಂದು ಗೋವಾ, ದಮನ್ ಮತ್ತು ಡಿಯು ಪೋರ್ಚುಗೀಸ್ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa