
ಬೆಳಗಾವಿ, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ–2025ಕ್ಕೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿದೆ. ವಿಧೇಯಕದ ಕುರಿತು ಸದನದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಖಾಸಗಿ ಆಸ್ಪತ್ರೆಗಳ ನೋಂದಣಿ ಪ್ರಕ್ರಿಯೆಯಲ್ಲಿ ಉಂಟಾಗುತ್ತಿದ್ದ ಅನಗತ್ಯ ವಿಳಂಬವನ್ನು ತಡೆಯಲು ಈ ಕಾನೂನು ಅಗತ್ಯವಾಗಿದೆ ಎಂದು ಹೇಳಿದರು.
ವಿಧೇಯಕದಂತೆ, ಖಾಸಗಿ ವೈದ್ಯಕೀಯ ಸಂಸ್ಥೆಗಳ ಪಟ್ಟಿಗೆ ಮಾನಸಿಕ ಆರೋಗ್ಯ ಸಂಸ್ಥೆಗಳನ್ನೂ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ಆರಂಭಗೊಳ್ಳುವ ಆಸ್ಪತ್ರೆಗಳಿಗೆ ಅರ್ಜಿ ಸಲ್ಲಿಸಿದ 10 ದಿನಗಳೊಳಗೆ ತಾತ್ಕಾಲಿಕ ನೋಂದಣಿ ನೀಡಲಾಗುವುದು. ಬಳಿಕ ಆರು ತಿಂಗಳ ಅವಧಿಯಲ್ಲಿ ಇಲಾಖೆ ನಿಗದಿಪಡಿಸಿದ ಎಲ್ಲಾ ಷರತ್ತುಗಳನ್ನು ಪೂರೈಸಿ ಶಾಶ್ವತ ಪ್ರಮಾಣಪತ್ರ ಪಡೆಯಬೇಕಾಗುತ್ತದೆ.
ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಧಿಕಾರಕ್ಕೆ ಭಾರತೀಯ ವೈದ್ಯಕೀಯ ಸಂಘದಿಂದ ಒಬ್ಬ ಸದಸ್ಯ ಹಾಗೂ ನೊಂದಾಯಿತ ವೈದ್ಯಕೀಯ ಸಂಸ್ಥೆ ಅಥವಾ ಆಯುಷ್ ವೈದ್ಯಕೀಯ ವೃತ್ತಿ ನಿರತ ಸಂಘವನ್ನು ಪ್ರತಿನಿಧಿಸುವ ಒಬ್ಬ ಸದಸ್ಯರನ್ನು ನಾಮನಿರ್ದೇಶನ ಮಾಡುವ ವ್ಯವಸ್ಥೆಯನ್ನು ವಿಧೇಯಕ ಒಳಗೊಂಡಿದೆ. ಈ ಪ್ರಾಧಿಕಾರಕ್ಕೆ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರ ಮಂಜೂರು ಮಾಡುವ ಹಾಗೂ ನವೀಕರಿಸುವ ಅಧಿಕಾರ ನೀಡಲಾಗಿದೆ.
ಕೆಪಿಎಂಇ ಕಾಯ್ದೆಯಡಿ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಈ ತಿದ್ದುಪಡಿಗಳನ್ನು ತರಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ನೋಂದಣಿ ವಿಳಂಬದಿಂದ ಆಸ್ಪತ್ರೆಗಳ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿತ್ತು ಎಂಬುದನ್ನು ಅವರು ಸದನದ ಗಮನಕ್ಕೆ ತಂದರು.
ಇದಲ್ಲದೆ, ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ EDAR ಪೋರ್ಟಲ್‌ನಲ್ಲಿ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಈ ಪೋರ್ಟಲ್‌ನಲ್ಲಿ ರೋಗಿಯ ಸಂಪೂರ್ಣ ವೈದ್ಯಕೀಯ ಮಾಹಿತಿ ಲಭ್ಯವಿರುವುದರಿಂದ, ರೋಗಿಯ ಚಿಕಿತ್ಸಾ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa