



ಕೊಪ್ಪಳ, 16 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಕಠಿಣ ವಿಷಯಗಳನ್ನು ಸರಳೀಕರಿಸಿ ಮಕ್ಕಳಿಗೆ ಸುಲಭವಾಗಿ ತಿಳಿಯುವ ಹಾಗೆ ಪಾಠ ಬೋಧನೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲಾ ಪಂಚಾಯತ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ದತ್ತು ಶಾಲೆ ಹಾಗೂ ಎಸ್.ಎಸ್.ಎಲ್.ಸಿ ತಾಲ್ಲೂಕು ನೋಡಲ್ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಿಗೆ ಕರೆದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದ ಸುಧಾರಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಿಗೆ ಸರಿಯಾಗಿ ತಿಳಿಯುವ ರೀತಿಯಲ್ಲಿ ವಿಶೇಷ ಕೌಶಲ್ಯಗಳನ್ನು ಉಪಯೋಗಿಸಿ ಪಾಠ ಮಾಡಿದರೆ ಅವರು ತಮ್ಮ ತರಗತಿಯಲ್ಲಿ ಆಸಕ್ತಿಯಿಂದ ಕುಳಿತು ತಾವು ಹೇಳುವ ಪಾಠವನ್ನು ಕಲಿಯುತ್ತಾರೆ. ನಾವು ಕಲಿಯುವ ಅಂದಿನ ದಿನಮಾನಗಳಲ್ಲಿ ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆ ತಿಳಿದು ವಿಶೇಷ ಕಾಳಜಿವಹಿಸಿ ಅವರಿಗೆ ಪಾಠ ಮಾಡುತ್ತಿದ್ದರು. ಗಣಿತ, ಹಳೆಗನ್ನಡ ಸೇರಿದಂತೆ ಇತರೆ ಕಠಿಣ ವಿಷಯಗಳನ್ನು ಸರಳೀಕರಿಸಿ ಪಾಠ ಮಾಡಿದಾಗ ಆ ವಿಷಯ ಮಕ್ಕಳ ತಲೆಯಲ್ಲಿ ಸುಲಭವಾಗಿ ಹೋಗುತ್ತದೆ ಎಂದರು.
ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ವಿಶೇಷ ಒತ್ತು ನೀಡಬೇಕು. ಕಳೆದ ಸಲದಂತೆ ಈ ಸಲ ನಮ್ಮ ಜಿಲ್ಲೆಯ ಫಲಿತಾಂಶ ಕಡಿಮೆಯಾಗಬಾರದು. ಜಿಲ್ಲೆಯಲ್ಲಿ ಈ ಹಿಂದೆ ಒಳ್ಳೆಯ ಫಲಿತಾಂಶ ಬಂದ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಬೋಧನೆ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕಲಿಕೆ ನಿರಂತರ ಪ್ರಕ್ರಿಯೆ ಇಲ್ಲಿ ಎಲ್ಲರೂ ದಿನಾಲೂ ಒಂದಿಲ್ಲ ಒಂದು ಹೊಸದನ್ನು ಕಲಿಯುತ್ತಲೆ ಇರಬೇಕು. ಶಿಕ್ಷಕರು ಅಹಂ ಬಿಟ್ಟು ಕೆಲಸ ಮಾಡಿದಾಗ ತಮ್ಮ ಗುರಿ ತಲುಪಲು ಸಾಧ್ಯವಿದೆ ಎಂದರು.
ಫಲಿತಾಂಶ ಕಡಿಮೆಯಾದ ಶಾಲೆಗಳನ್ನು ದತ್ತು ಪಡೆದು ಅವುಗಳ ಸುಧಾರಣೆಗೆ ಒತ್ತು ನೀಡಬೇಕು. ಅನುದಾನಿತ ಶಾಲೆಗಳಿಗೂ ವಿಶೇಷ ಒತ್ತು ನೀಡಬೇಕು. ಅಲ್ಲಿ ಸರಿಯಾದ ಶಿಕ್ಷಕರು ಇರುವುದಿಲ್ಲ. ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿಸುವುದರ ಜೊತೆಗೆ ಶಿಕ್ಷಕರು ವಿದ್ಯಾರ್ಥಿಗಳ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಒತ್ತು ನೀಡಬೇಕು. ಕೆಲವೊಂದು ಶಾಲೆಗಳಲ್ಲಿ ಶಿಕ್ಷಕರು ಸರಿಯಾಗಿ ಪಾಠಮಾಡುವುದಿಲ್ಲ ಹಾಗೂ ಅನಧಿಕೃತ ಗೈರಾಗುತ್ತಾರೆ ಎನ್ನುವ ದೂರುಗಳಿಗೆ. ಅವುಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಕಡಿಮೆ ಫಲಿತಾಂಶ ಬಂದ ಶಾಲೆಯ ಸುಧಾರಣೆಗೆ ಏನು ಕ್ರಮವಹಿಸಲಾಗಿದೆ ಎಂದು ಸಂಬಂಧಿಸಿದ ಶಾಲೆಯ ಶಿಕ್ಷಕರಿಗೆ ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ಎಸ್.ಎಸ್.ಎಲ್.ಸಿ. ಯಲ್ಲಿ ಶೂನ್ಯ ಫಲಿತಾಂಶ ಬಂದ ಶಾಲೆಗಳಿಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಅವರು ಮಾತನಾಡಿ, ಜಿಲ್ಲೆಯ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಣೆ ಮಾಡಲಾಗುತ್ತಿದೆ. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳಿಗೆ ಇನ್ನೂ ಮೂರು ತಿಂಗಳು ಮಾತ್ರ ಉಳಿದಿದ್ದು, ಎಲ್ಲಾ ಮುಖ್ಯೋಪಾಧ್ಯಾಯರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬೆಳಿಗ್ಗೆ ಮತ್ತು ಸಂಜೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವಾಗ ಶಾಲೆಯ ಎಲ್ಲಾ ಶಿಕ್ಷಕರ ಉಪಸ್ಥಿತಿ ಬಹಳ ಮುಖ್ಯವಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಮಕ್ಕಳ ಫಲಿತಾಂಶ ಹೆಚ್ಚಳಕ್ಕೆ ಒತ್ತು ನೀಡಬೇಕು. ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಈ ಸಲ ಎಲ್ಲರೂ ಒಟ್ಟಿಗೆ ಶ್ರಮಿಸೋಣ ಎಂದರು.
ಅಕ್ಷರ ದಾಸೋಹವು ಬರಿ ಒಂದು ಯೋಜನೆಯಲ್ಲ. ಅದು ಸಾಮಾಜಿಕ ಕಳಕಳಿಯ ಕಾರ್ಯಕ್ರಮವಾಗಿದೆ. ಹಾಗಾಗಿ ಪ್ರತಿನಿತ್ಯದ ಅಡುಗೆಯನ್ನು ಸ್ವಚ್ಛತೆಯಿಂದ ಮಾಡುತ್ತಿದ್ದಾರೆಯೇ ಎಂಬುವುದರ ಬಗ್ಗೆ ಆಯಾ ಶಾಲಾ ಮುಖ್ಯ ಗುರುಗಳು ಪರಿಶೀಲಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. ಇದರ ಜೊತೆಗೆ ಸಮಯ ಸಿಕ್ಕಾಗ ಶಾಲೆಗಳಲ್ಲಿ ಮಕ್ಕಳ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಾಲ್ಯವಿವಾಹ ನಿಷೇಧ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಕುರಿತು ಅರಿವು ಮೂಡಿಸಿ ಎಂದು ಮುಖ್ಯೋಪಾಧ್ಯಯರಿಗೆ ತಿಳಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯ ವಿಷಯ ಪರಿವೀಕ್ಷರು, ದತ್ತು ಶಾಲೆ ಹಾಗೂ ಎಸ್.ಎಸ್.ಎಲ್.ಸಿ ತಾಲ್ಲೂಕು ನೋಡಲ್ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಸರಕಾರಿ, ಅನುದಾನಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್