

ಬಳ್ಳಾರಿ, 16 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೆಲಸಗಾರರು ಮತ್ತು ಉದ್ಯೋಗದಾತರು ಕಡ್ಢಾಯವಾಗಿ ಇಎಸ್‍ಐನಲ್ಲಿ ಹೆಸರು ನೋಂದಣಿ ಮಾಡಿ ಕೆಲಸಗಾರರಿಗೆ ಆರೋಗ್ಯ ಭದ್ರತೆಯ ಜೊತೆಯಲ್ಲಿ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಸೀಟು ಪಡೆಯಲು ನೆರವಾಗಬೇಕು ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಇಎಸ್‍ಐ `ಸ್ಪ್ರೀ - 2025-(ಎಸ್‍ಪಿಆರ್‍ಇಇ)'ರ ಹೆಸರು ನೋಂದಣಿಯ ವಿಶೇಷ ಯೋಜನೆಯನ್ನು ಬಿಡಿಸಿಸಿಐನ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿದ ಅವರು, `ಸ್ಪ್ರೀ-2025-(ಎಸ್‍ಪಿಆರ್‍ಇಇ)' ವಿಶೇಷ ಹೆಸರು ನೋಂದಣಿ ಯೋಜನೆಯು ಉದ್ಯೋಗದಾತರು ಮತ್ತು ಕೆಲಸಗಾರರ ಸ್ನೇಹಿಯಾಗಿದೆ. ಕಾರಣ ಪ್ರತಿಯೊಂದು ಸಂಸ್ಥೆಯು ಕೆಲಸಗಾರರನ್ನು ಇಎಸ್‍ಐ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಸಬೇಕು ಎಂದರು.
ಇಎಸ್‍ಐನಲ್ಲಿ ಹೆಸರು ನೋಂದಣಿ ಮಾಡಿಕೊಂಡ ನೌಕರರು-ಕೆಲಸಗಾರರ ಮಕ್ಕಳಿಗೆ ಕೆಲ ನಿಯಮಗಳ ಪ್ರಕಾರ - ಷರತ್ತುಗಳಿಗೆ ಒಳಪಟ್ಟು ವೈದ್ಯಕೀಯ, ಡೆಂಟಲ್ ಮತ್ತು ಪ್ಯಾರಾ ಮೆಡಿಕಲ್ ಸೀಟುಗಳನ್ನು ಪಡೆಯಲು ಸೌಲಭ್ಯಗಳಿವೆ. ಈ ಸೌಲಭ್ಯಗಳು ಸಾಮಾನ್ಯರಿಗಿಂತಲೂ ವಿಶೇಷವಾಗಿ ಪರಿಗಣಿಸಲ್ಪಟ್ಟಿವೆ. ಬಡ ಮತ್ತು ಮಧ್ಯಮವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ನೆರವಾಗಲು ಇಎಸ್‍ಐನಲ್ಲಿ ನೋಂದಣಿ ಮಾಡಿ ನೆರವಾಗಿರಿ ಎಂದರು.
ಇಎಸ್‍ಐನ ಸಮಾಜಿಕ ಭದ್ರತೆಯ ಕಲ್ಬುರ್ಗಿ ವಿಭಾಗೀಯ ಅಧಿಕಾರಿ ಹನೀಫ್ ಕೆ. ಶೇಖ್ ಅವರು, ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು, ಇಎಸ್‍ಐ ಯೋಜನೆ ಮತ್ತು ಸೌಲಭ್ಯಗಳು, ಇಎಸ್‍ಐನ ನಿಯಮಗಳು - ಷರತ್ತುಗಳ ಉಲ್ಲಂಘನೆ ಮತ್ತು ಇಎಸ್‍ನ ನೋಂದಣಿ ವ್ಯಾಪ್ತಿಯ ಪರಿಭಾಷೆಯನ್ನು ಸಮಗ್ರವಾಗಿ ವಿವರಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು ಕಾರ್ಯಕ್ರಮ ನಿರೂಪಿಸಿದರು. ಇಎಸ್‍ಐ ಬಳ್ಳಾರಿ ಕಚೇರಿಯ ವ್ಯವಸ್ಥಾಪಕಿ ಶ್ರೀಮತಿ ಅನೂರಾಧ ಅವರು ವಂದನಾರ್ಪಣೆ ಸಲ್ಲಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಗಿರಧರ ಸೊಂತ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ಖಜಾಂಚಿಗಳಾದ ನಾಗಳ್ಳಿ ರಮೇಶ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ಬಳ್ಳಾರಿ ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ಮರಿಸ್ವಾಮಿ ರೆಡ್ಡಿ, ಬೆಸ್ಟ್ ಶಾಲೆಯ ಎಂ. ಶ್ರೀನಿವಾಸ, ವಿವಿಧ ಶಿಕ್ಷಣ ಸಂಸ್ಥೆಗಳವರು - ಕೈಗಾರಿಕೆಗಳವರು ಹಾಗೂ ವಿವಿಧ ಸಂಘ - ಸಂಸ್ಥೆಗಳವರು ಸಭೆಯಲ್ಲಿ ಪಾಲ್ಗೊಂಡು, ಇಎಸ್‍ಐನಲ್ಲಿ ಹೆಸರು ನೋಂದಣಿ ಮಾಡುವ ಕುರಿತು ನಡೆದ ಪ್ರಶ್ನೋತ್ತರ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್