
ರಾಯಚೂರು, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಹರಿದಾಸ ಪರಂಪರೆಯಲ್ಲಿ ಅಪಾರ ಕೊಡುಗೆ ನೀಡಿದ ದಾಸಶ್ರೇಷ್ಠರೆಂದು ಖ್ಯಾತಿ ಪಡೆದ ಕನಕದಾಸರು ಅವರ ಜೀವನ ಬದ್ಧತೆ, ಕೀರ್ತನೆಗಳು, ಚಿಂತನೆಗಳು, ಕಾವ್ಯಗಳ ಮೂಲಕ ಜಗತ್ತಿಗೆ ಸಾರ್ವಕಾಲಿಕ ಮೌಲ್ಯಗಳನ್ನು ಸಾರಿದ್ದಾರೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದ್ದಾರೆ.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಆಚರಣೆ ನಿಮಿತ್ಯ ಕನಕರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಶಿಗ್ಗಾವ್ ತಾಲೂಕಿನ ಬಾಡಾ ಗ್ರಾಮದಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಕನಕದಾಸರು ಜೀವದಲ್ಲಿ ಸಾಕಷ್ಟು ಕಷ್ಟಕಾರ್ಪಣ್ಯಗಳು ದಾಟಿ ಮುಂದೆ ಆದಿಕೇಶವರ ಭಕ್ತರಾಗಿ ವ್ಯಾಸರಾಜರ ಬೋಧನೆಗಳಿಂದ ಪ್ರೇರಿತರಾಗಿ ತಮ್ಮ ಎಲ್ಲಾ ಭೌತಿಕ ಅನ್ವೇಷಣೆಗಳನ್ನು ತೊರೆದು ಭಕ್ತಿಗೆ ತಮ್ಮ ಜೀವನವನ್ನು ಸಮರ್ಪಿಸಿದವರು.
ಕನಕದಾಸರ ಸಾಮಾಜಿಕ ಪರಿಕಲ್ಪನೆಯ ಸಂದೇಶಗಳು ಯಾವುದೇ ಜಾತಿ ಧರ್ಮ ಪ್ರದೇಶ ಅಥವಾ ಭಾಷೆಗೆ ಸೀಮಿತವಾಗದೆ ಇಂದಿನ ಆಧುನಿಕ ಸಮಾಜಕ್ಕೂ ಅತ್ಯಮೂಲ್ಯವಾಗಿವೆ. ‘ಕುಲಕುಲವೆಂದು ಹೊಡೆದಾಡದಿರಿ’, ‘ದೇವರು ಬಾಂದಾನೋ ಬಂದಿರಾ’, ‘ಅಂಗದ ಮೇಲೆ ಲಿಂಗ ಇದ್ದÀರೇನು ಅಂತರಾಳದಲ್ಲಿ ಪ್ರಜ್ಞೆಇಲ್ಲದಿದ್ದರೆ’ ಎನ್ನುವ ಕೀರ್ತನೆಗಳು ಸಾಮಾಜಿಕ ಪ್ರಜ್ಞೆಯಿಂದ ಕೂಡಿದ್ದು ಕುಲದ ಶ್ರೇಷ್ಟತೆ ಬಗ್ಗೆ ಮತ್ತು ತಳ ಸಮುದಾಯದ ಆಶಯಗಳನ್ನು ಎತ್ತಿಹಿಡಿಯುತ್ತವೆ. ಮೋಕ್ಷ ಸಿಗಬೇಕೆಂದರೆ ‘ನಾನು’ ಎಂಬ ಅಹಂಕಾರವನ್ನು ತ್ಯಜಿಸಿ ದಾಸನಾಗಬೇಕು ಎಂದು ತ್ಯಾಗದ ಮಹತ್ವವನ್ನು ತಿಳಿಸಿದ ಕನಕರು ‘ಮೋಹನ ತರಂಗಿಣಿ’, ‘ನಳ ಚರಿತ್ರೆ,‘ ‘ಹರಿಭಕ್ತಿಸಾರ’ ದಂತಹ ಕಾವ್ಯಗಳ ಮೂಲಕ ಸಾಮಾಜಿಕ ಸಂದೇಶಗಳನ್ನು ಲೋಕಕ್ಕೆ ಸಾರಿದ್ದಾರೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ನಿಕಾಯ ಡೀನರಾದ ಪ್ರೊ.ಪಾರ್ವತಿ ಸಿ.ಎಸ್, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಅತಿಥಿ ಉಪನ್ಯಾಸಕ ಅನಿಲ್ ಅಪ್ರಾಳ್ ಸ್ವಾಗತಿಸಿ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್