



ರಾಯಚೂರು, 08 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದ ವಿವಿಧ ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಅಂದರೆ ನಮ್ಮ ಜಿಲ್ಲೆಯ ಮಕ್ಕಳಲ್ಲಿರುವ ಪ್ರತಿಭೆ ರಾಜ್ಯಾಂದ್ಯಂತ ಪರಿಚಯವಾಗಲು ಅನುಕೂಲವಾಗಲಿದೆ. ಇಂತಹ ಕ್ರೀಡಾಕೂಟಗಳ ಮೂಲಕ ನಮ್ಮ ಜಿಲ್ಲೆಯಲ್ಲಿರುವ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಬೆಳೆಯಲಿ ಎಂದು ಸಚಿವರಾದ ಎನ್ ಎಸ್ ಬೋಸರಾಜು ಅವರು ತಿಳಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ವಿಕ್ಟೋರಿ ಬ್ಯಾಡ್ಮಿಂಟನ್ ಅಕ್ಯಾಡಮಿ ಹಾಗೂ ಎನ್ಎಸ್ ಬೋಸರಾಜು ಫೌಂಡೇಷನ್ ಸಹಯೋಗದೊಂದಿಗೆ ಯುನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕ್ರೀಡಾಂಗಣಕ್ಕೆ ಬೇಕಾದ ಮೂಲ ಸೌಲಭ್ಯ ಒದಗಿಸಲು ಸಹಕಾರವಿರುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಯಂತೆ ಕ್ರೀಡಾಂಗಣ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು.
ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ತುಂಬುವ ಕೆಲಸ ಮಾಡಬೇಕು. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಿಗಲಿದೆ. ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವ ಕ್ರೀಡಾ ಪ್ರೇಮಿಗಳಿಗೆ ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಉಪಾ ಮಹಾಪೌರರಾದ ಸಾಜಿದ್, ಸಮೀರ್, ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಶಾಲಂ, ಜಯಣ್ಣ, ಕೆ ಶಾಂತಪ್ಪ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ, ನರಸಿಂಹಲು ಮಾಡಿರಿ, ವಿಕ್ಟೋರಿ ಬ್ಯಾಡ್ಮಿಂಟನ್ ಅಕಾಡಮಿ ಉಸ್ತುವಾರಿಯಾದ ಅರವಿಂದ್, ಕಿರಣ್ ಬೆಲ್ಲಂ, ಯುವ ಮುಖಂಡರಾದ ಸುಮನ್, ವಿಶ್ವೇಶ್ವರ ರಾವ್, ನರೇಶ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಅಧಿಕಾರಿಯ ವೀರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್