
ಬಳ್ಳಾರಿ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಕನಕದಾಸರ ಕಾವ್ಯ ಹಾಗೂ ತತ್ವಪದಗಳು ಮಾನವಿ ಮೌಲ್ಯಗಳಿಂದ ಇಂದಿಗೂ ಪ್ರಸ್ತುತವಾಗಿವೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ (ಪ್ರ) ನಿರ್ದೇಶಕರಾದ ಡಾ. ತಿಪ್ಪೇರುದ್ರ ಅವರು ಹೇಳಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯನ್ನು ಕನಕದಾಸರ ಭಾವಚಿತ್ರಕ್ಕೆ ಗಣ್ಯರು ಪುಪ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕನ್ನಡ ಕಾವ್ಯ ಪರಂಪರೆಯಲ್ಲಿ ಕನಕದಾಸರನ್ನು ಉನ್ನತ ಸ್ಥಾನದಲ್ಲಿರಿಸಿದ್ದೇವೆ. ನಮ್ಮ ಕನ್ನಡ ಸಾಹಿತ್ಯದ ಎರಡು ಕಣ್ಣುಗಳೆಂದರೆ ವಚನ ಸಾಹಿತ್ಯ ಮತ್ತು ಕೀರ್ತನಾ ಸಾಹಿತ್ಯಗಳಾಗಿವೆ.
ಕನಕದಾಸರ ಕೊಡುಗೆಯನ್ನು ಅವರವರ ದೃಷ್ಟಿಕೋನಕ್ಕೆ, ಆಲೋಚನೆ, ಜ್ಞಾನದ ಮಿತಿಯಲ್ಲಿ ಅವರನ್ನು ಅರ್ಥೈಸುವಲ್ಲಿ ಅನೇಕ ಸಂಶೋಧನೆ ಇಂದಿಗೂ ನಡೆಯುತ್ತಿವೆ. ದಾಸರ ಕೀರ್ತನೆಗಳು ಮಾನವ ಕುಲಕ್ಕೆ ಮಾದರಿಯಾಗಿದೆ. ಜನರ ಸಾಮಾಜಿಕ ಬದುಕಿನ ವಾಸ್ತವಾಂಶಗಳನ್ನು ಒಳಗೊಂಡಿದೆ ಎಂದರು.
ವಿಶ್ವವಿದ್ಯಾಲಯದ ಕುಲಸಚಿವರಾದ ನಾಗರಾಜು ಸಿ ಮಾತನಾಡಿ, ಕನಕದಾಸರು ಸಮಾಜ ಸುಧಾರಣೆ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಸಮಾನತೆ, ಶಾಂತಿ. ಸಹಬಾಳ್ವೆಯ ಸಮಾಜದಲ್ಲಿ ಸರ್ವಕಾಲಿಕವಾದದ್ದು. ದಾಸರ ಅನುಭವದ ಚಿಂತನೆಗಳನ್ನು ಅಳವಡಿಸಿ ಮುನ್ನಡೆಯಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಿವಕುಮಾರ್ ಕೆ ಮಾತನಾಡಿ, ಕೀರ್ತನೆಗಳು ಕಾವ್ಯಗಳ ಮೂಲಕ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದಾಸರ ಚಿಂತನೆಗಳು ಅವರ ವಚನಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಘಟಕದ ಸಂಯೋಜಕರಾದ ಡಾ ಕೆ ಸಿ ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಶಿಧರ್ ಕೆಲ್ಲೂರ್ ನಿರೂಪಿಸಿ, ವಂದಿಸಿದರು. ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್