



ಬಳ್ಳಾರಿ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ರೈತರ ಸಮಸ್ಯೆಗಳನ್ನು ಕೃಷಿ ಇಲಾಖೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಸಂಪರ್ಕ ಕೊಂಡಿಯಾಗಿ ಕೃಷಿಕ ಸಮಾಜವು ಕೆಲಸ ನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹೇಳಿದ್ದಾರೆ.
ಜಿಲ್ಲಾ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜ ಇವರ ಸಹಯೋಗದಲ್ಲಿ ನಗರದ ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬಳ್ಳಾರಿ ಘಟಕ ಕೃಷಿಕ ಸಮಾಜದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ವತಂತ್ರ ಪೂರ್ವದಲ್ಲೇ ಪ್ರಾರಂಭವಾದ ಕೃಷಿಕ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಕೃಷಿಕ ಸಮಾಜ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ರೈತರನ್ನು ತಾರತಮ್ಯ ಮಾಡುತ್ತಿಲ್ಲ; ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ರೈತರ ಪರ ಕಾಳಜಿ ಹೊಂದಿದೆ. ಕೊಟ್ಟ ಮಾತಿನಂತೆ ಎಲ್ಲಾ ಸಚಿವರು, ಶಾಸಕರ ಸಹಕಾರದಲ್ಲಿ ಶೀಘ್ರದಲ್ಲಿ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗುವುದು. ಇದರಿಂದ ಹೊಸಪೇಟೆ, ಬಳ್ಳಾರಿ, ಕಂಪ್ಲಿ ಮತ್ತು ಹಗರಿ ಬೊಮ್ಮನಹಳ್ಳಿ ಭಾಗದ ರೈತರಿಗೆ ಅನುಕೂಲವಾಗಲಿದೆ. ರೈತರನ್ನು ಸಮಾನ ದೃಷ್ಠಿಯಿಂದ ಕಾಣುವ ಏಕೈಕ ಸರ್ಕಾರ ನಮ್ಮದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿ ಲೋಕಸಭಾ ಸಂಸದ ಈ.ತುಕಾರಾಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯ 08 ತಾಲ್ಲೂಕುಗಳಲ್ಲಿ ಸಂಸದರ ಅನುದಾನದಲ್ಲಿ ಪ್ರತಿ ತಾಲ್ಲೂಕಿಗೆ 02 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಕಂಪ್ಯೂಟರ್, ಪೆÇ್ರಜೆಕ್ಟರ್ ಗಳನ್ನು ರೈತ ಸಂಪರ್ಕ ಕೇಂದ್ರಗಳಿಗೆ ನೀಡಲಾಗಿದೆ. ಇದರಿಂದ ವೈಜ್ಞಾನಿಕ ಬೆಳೆ ಪದ್ಧತಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರ ಕುರಿತು ರೈತರಿಗೆ ತರಬೇತಿ ನೀಡಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ನಮ್ಮಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ರೈತರನ್ನು ಮುನ್ನೆಲೆಗೆ ತರಲು ಹಾಗೂ ನಾಡನ್ನು ಕಟ್ಟುವ ಕೆಲಸ ಮಾಡೋಣ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಕಂಪ್ಲಿ, ಕುರುಗೋಡು, ಸಿರುಗುಪ್ಪ ಭಾಗಗಳಲ್ಲಿ ಭತ್ತದ ಬೆಳೆಯು ಹಾನಿಯಾಗಿದ್ದು, ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಮತ್ತು ಜಿಲ್ಲೆಯಲ್ಲಿ ಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಬಳ್ಳಾರಿ ಜಿಲ್ಲೆಯು 2,81,522 ಎಕರೆ ಕೃಷಿ ಭೂಮಿ ಹೊಂದಿದ್ದು, 1,05,517 ಎಕರೆ ಮಳೆಯಾಧಾರಿತ ಪ್ರದೇಶ, 1,76,005 ಎಕರೆ ನೀರಾವರಿ ಪ್ರದೇಶವಿದ್ದು, ಈ ಬಾರಿಯಂತೆ ಮುಂದಿನ ವರ್ಷದಲ್ಲಿಯೂ ಸಹ ಉತ್ತಮ ಮಳೆ, ಬೆಳೆಯಾಗಿ ನಾಡು, ನಮ್ಮ ಜಿಲ್ಲೆ ಸಮೃದ್ಧಿಯಾಗಬೇಕು ಎಂದು ಆಶಿಸಿದರು.
ಜಂಟಿ ಕೃಷಿ ನಿದೇರ್ಶಕ ಸೋಮಸುಂದರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಂಡುಬರುವ ಕೃಷಿಗೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳನ್ನು ರಾಜ್ಯ ಮಟ್ಟದ ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯುವ ಕಾರ್ಯವು ಕೃಷಿಕ ಸಮಾಜದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ಕೃಷಿಕ ಸಮಾಜದಲ್ಲಿ 10 ಜನ ನಿರ್ದೇಶಕ ಮಂಡಳಿಯ ಸದಸ್ಯರಿದ್ದು, ಎಲ್ಲರ ಪ್ರಯತ್ನದಿಂದ 1984 ರಲ್ಲಿ ಜಿಲ್ಲಾಧಿಕಾರಿಯವರಿಂದ 10,368 ಚದರ ಅಡಿ ನಿವೇಶನ ಪಡೆದುಕೊಂಡು 2020 ರಲ್ಲಿ ಕಟ್ಟಡ ನಿರ್ಮಾಣಕ್ಕೆ ಸಭೆಯಲ್ಲಿ ತೀರ್ಮಾನಿಸಿ, 2022ರಲ್ಲಿ ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಬಳಿಕ 2025 ರಲ್ಲಿ ರೂ.1 ಕೋಟಿ ರೂ. ಅಧಿಕ ವೆಚ್ಚದ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಂಡಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನ್‍ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಬಳ್ಳಾರಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಗಾದೆಪ್ಪ, ಉಪಾಧ್ಯಕ್ಷರಾದ ಎಸ್.ಕೆ ವಿಶಾಲಾಕ್ಷಿ ಕುಮಾರಸ್ವಾಮಿ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಸುರೇಶ್ ನಂದಿ.ಪಿ., ಉಪ ಕೃಷಿ ನಿರ್ದೇಶಕ ಮಂಜುನಾಥ್ ಎಸ್.ಎನ್ ಸೇರಿದಂತೆ ಪಾಲಿಕೆ ಸದಸ್ಯರು, ಕೃಷಿ ಸಮಾಜದ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಎಲ್ಲಾ ರೈತ ಮತ್ತು ಸಂಘ-ಸಂಸ್ಥೆಗಳು, ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಕೃಷಿ ಸಚಿವರು, ಆಧುನಿಕ ಕೃಷಿ ಯಂತ್ರೋಪಕರಣಗಳು, ಸಾವಯವ ರಸ-ಗೊಬ್ಬರ, ಕೃಷಿ ಪರಿಕರಗಳು, ಪಿಎಂಎಫ್‍ಎಂಇ ಯೋಜನೆಯಡಿ ಅನುಷ್ಠಾನಗೊಂಡ ಆಹಾರಾ ಸಂಸ್ಕರಣಾ ಘಟಕಗಳ ಆಹಾರ ಉತ್ಪನ್ನ ಮಳಿಗೆ ಹಾಗೂ ವಿವಿಧ ಯೋಜನೆಗಳ ಮಾಹಿತಿಗಳನ್ನೊಳಗೊಂಡ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್