
ವಿಜಯಪುರ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ರೈತರಲ್ಲಿ ಸುಸ್ಥಿರ ಹೈನುಗಾರಿಕೆ ಉತ್ತೇಜಿಸಲು ಕ್ಷೀರ ಪೈಲಟ್ ಯೋಜನೆಗೆ ಚಾಲನೆ ಕಾರ್ಯಕ್ರಮ ನವೆಂಬರ್ 8 ರಂದು ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲೆಯಲ್ಲಿ ಜಲ, ವೃಕ್ಷ, ಶಿಕ್ಷಣ ಅಭಿಯಾನದ ನಂತರ ಸಚಿವ ಎಂ.ಬಿ.ಪಾಟೀಲ ಅವರು ವಿಶೇಷ ಆಸಕ್ತಿ ವಹಿಸಿ, ಜಿಲ್ಲೆಯ ರೈತರಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು ರೈತರು ಸಾಲ-ಸೋಲ ಮಾಡದೇ, ಬೃಹತ್ ಡೈರಿ ಘಟಕಗಳನ್ನು ನಿರ್ಮಿಸದೇ ಹಾಗೂ ಹೊರಗಡೆಯಿಂದ ಯಾವುದೇ ಉತ್ಪನ್ನಗಳನ್ನು ಖರೀದಿ ಮಾಡದೇ, ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆಯನ್ನು ಪ್ರಾರಂಭಿಸಿ, ಸಹಜ ಕೃಷಿ ಪದ್ದತಿಯಲ್ಲಿ ಮೇವು, ತರಕಾರಿ ಮತ್ತಿತರ ಮಿಶ್ರ ಬೆಳೆಗಳನ್ನು ಬೆಳೆದು, ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆಯನ್ನು ಹೆಚ್ಚಿಸಿ, ಕೃಷಿಯ ಜೊತೆಗೆ ಈ ಉಪಕಸುಬಿನಲ್ಲಿ ತೊಡಗುವುದರ ಮೂಲಕ ನಿರಂತರ ಆದಾಯವನ್ನು ವೃದ್ಧಿಗೊಳಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ದೊರೆತಿರುವ ನೀರಾವರಿ ಯೋಜನೆಗಳ ಸದುಪಯೋಗ ಪಡೆಸಿಕೊಂಡು, ರೈತರು ಹೈನುಗಾರಿಕೆ ಕೈಗೊಳ್ಳಲು ವಿಪುಲ ಅವಕಾಶಗಳಿದ್ದು, ಪಶುಸಂಗೋಪನೆ ಹಾಗೂ ಸ್ಥಳೀಯವಾಗಿ ಹಾಲು ಉತ್ಪಾದಕ ಸಂಘಗಳ ಮೂಲಕ ಮಾರುಕಟ್ಟೆಯನ್ನು ರೈತರು ಪಡೆಯುವ ಮೂಲಕ ಈ ಉಪಕಸುಬಿನಿಂದ ಉತ್ತಮ ಆದಾಯ ಪಡೆಯಬಹುದಾಗಿದೆ.
ಮೊದಲ ಹೆಜ್ಜೆಯಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ, ನಾಗರಾಳ, ನಿಡೋಣಿ, ಕುಮಠೆ, ಯಕ್ಕುಂಡಿ ಗ್ರಾಮಗಳ ಆಯ್ದ ಆಸಕ್ತ ರೈತರ ತೋಟಗಳಲ್ಲಿ ಈ ಹೈನುಗಾರಿಕೆ ಕ್ಷೀರ ಪೈಲೆಟ್ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದು, ಈಗಾಗಲೇ ಕರ್ನಾಟಕದ ತಿಪಟೂರು ಭಾಗದಲ್ಲಿ ಅಕ್ಷಯಕಲ್ಪ ಫೌಂಡೇಶನ್ ಮೂಲಕ ಅಲ್ಲಿನ ರೈತರು ಸ್ವಾವಲಂಭಿಯಾಗಿರುವುದನ್ನು ಮಾದರಿಯಾಗಿಟ್ಟುಕೊಂಡು, ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಬಿಎಲ್.ಡಿ.ಇ ಸಂಸ್ಥೆಯಿಂದ ಇದಕ್ಕೆ ಯೋಜನೆಗೆ ಅಗತ್ಯ ಹಣಕಾಸು ನೆರವನ್ನು ಆರಂಭಿಕವಾಗಿ ನೀಡಲಾಗುತ್ತಿದೆ.
ಅಂದು ಬೆ.10 ರಿಂದ ಮ.12.30ರ ವರೆಗೆ ಜಿಲ್ಲೆಯ ರೈತರಿಗೆ ಮಾದರಿ ರೈತರು ಹಾಗೂ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಹಾಲು ಒಕ್ಕೂಟದ ಅಧಿಕಾರಿಗಳಿಂದ ಮಾಹಿತಿ ಗೋಷ್ಠಿ ನಡೆಯಲಿದೆ. ಇದರಲ್ಲಿ ಆಸಕ್ತ ರೈತರು ಪಾಲ್ಗೊಳ್ಳಬಹುದಾಗಿದೆ.
ಮ.12.30ಗಂ. ನಡೆಯಲಿರುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮತ್ತು ಬೆಂಗಳೂರಿನ ಅಸೆಲ್ ಕಂಪನಿ ಸಂಸ್ಥಾಪಕ ಪ್ರಶಾಂತ ಪ್ರಕಾಶ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬಿ.ಎಲ್.ಡಿ.ಇ ಅಧ್ಯಕ್ಷ ಮತ್ತು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆ ವಹಿಸಲಿದ್ದು, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಬಸನಗೌಡ ಎಂ.ಪಾಟೀಲ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ತಿಪಟೂರಿನ ಅಕ್ಷಯಕಲ್ಪ ಫೌಂಡೇಶನ್ ಸಂಸ್ಥಾಪಕ ಶಶಿಕುಮಾರ, ಬೆಂಗಳೂರಿನ ಕೃಷಿಕಲ್ಪ ಫೌಂಡೇಶನ್ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಸಿ.ಎಂ.ಪಾಟೀಲ ಉಪಸ್ಥಿತರಿರಲಿದ್ದಾರೆ ಎಂದು ಡಾ.ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande