
ನವದೆಹಲಿ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು 121 ಸ್ಥಾನಗಳಿಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯದ ಜನತೆಗೆ ಮತದಾನದ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪೋಸ್ಟ್ ಮಾಡಿದ್ದು, “ಪ್ರಜಾಪ್ರಭುತ್ವದ ಜನ್ಮಸ್ಥಳವಾದ ಬಿಹಾರದಲ್ಲಿ ಮತದಾನ ಪ್ರಾರಂಭವಾಗಿದೆ. ರಾಜ್ಯದ ಮತದಾರರು ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿ, 20 ವರ್ಷಗಳ ಬಳಿಕ ಬಿಹಾರಕ್ಕೆ ಬದಲಾವಣೆಯ ಹೊಸ ದಿಕ್ಕು ನೀಡಲಿ ಎಂದು ನಾನು ಮನವಿ ಮಾಡುತ್ತೇನೆ,” ಎಂದು ಹೇಳಿದ್ದಾರೆ.
“ಪ್ರಜಾಪ್ರಭುತ್ವದ ಈ ಮಹಾ ಉತ್ಸವದಲ್ಲಿ ಪ್ರತಿಯೊಬ್ಬ ಬಿಹಾರವಾಸಿಯೂ ಭಾಗವಹಿಸಬೇಕು. ಯುವಕರು, ರೈತರು, ಕಾರ್ಮಿಕರು ಮತ್ತು ಸಮಾಜದ ಪ್ರತಿಯೊಂದು ವರ್ಗದ ಭವಿಷ್ಯವನ್ನು ಭದ್ರಗೊಳಿಸಲು ಗರಿಷ್ಠ ಮತದಾನ ಅತ್ಯಗತ್ಯ,” ಎಂದಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಬಿಹಾರದ ಜನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಮನವಿ ಮಾಡಿದ್ದು, ನನ್ನ ಪ್ರೀತಿಯ ಸಹೋದರರೇ, ಸಹೋದರಿಯರೇ, ತಾಯಂದಿರೇ ಮತ್ತು ಬಿಹಾರದ ಯುವಕರೇ! ಇಂದು ನಿಮ್ಮ ಭವಿಷ್ಯವನ್ನು ನಿಮ್ಮ ಕೈಗಳಿಂದ ನಿರ್ಧರಿಸುವ ದಿನ. ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಭಾಗವಹಿಸಿ. ಉದ್ಯೋಗಗಳು, ಶಿಕ್ಷಣ, ಆರೋಗ್ಯ ಮತ್ತು ಬಿಹಾರದ ಉಜ್ವಲ ಭವಿಷ್ಯಕ್ಕಾಗಿ ಮತ ಚಲಾಯಿಸಿ ಎಂದು ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa