
ಬೆಂಗಳೂರು, 06 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ನಡೆಯಲಿರುವ ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಉಪನ್ಯಾಸ ಮಾಲೆಯ ಎರಡನೇ ಕಾರ್ಯಕ್ರಮ ಬೆಂಗಳೂರಿನ ಬನಶಂಕರಿಯ ಹೊಸಕೆರೆಹಳ್ಳಿಯ ಪಿಇಎಸ್ ವಿಶ್ವವಿದ್ಯಾನಿಲಯದಲ್ಲಿ ನವೆಂಬರ್ 8 ಮತ್ತು 9 ರಂದು ನಡೆಯಲಿದೆ.
ಈ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ರಾಷ್ಟೀಯ ಸ್ವಯಂಸೇವಕ ಸಂಘವು ಕಳೆದ ವಿಜಯದಶಮಿಯಂದು (ಅಕ್ಟೋಬರ್ 2, 2025) ತನ್ನ ನೂರು ವರ್ಷವನ್ನು ಪೂರ್ಣಗೊಳಿಸಿ ರಾಷ್ಟ್ರದ ಸರ್ವಾಂಗೀಣ ಉನ್ನತಿಯ ಧ್ಯೇಯದೊಂದಿಗೆ ಮುನ್ನಡೆದಿದೆ. ಶತಾಬ್ದಿ ವರ್ಷದಲ್ಲಿ ವಿಜಯದಶಮಿ ಉತ್ಸವಗಳು, ಯುವ ಸಮಾವೇಶ, ಮನೆಮನೆ ಸಂಪರ್ಕ, ಹಿಂದು ಸಮ್ಮೇಳನ, ಸಾಮಾಜಿಕ ಸದ್ಭಾವನಾ ಸಮಾವೇಶ, ಪ್ರಮುಖ ನಾಗರಿಕರ ವಿಚಾರಗೋಷ್ಠಿ ಮುಂತಾದ ಚಟುವಟಿಕೆಗಳನ್ನು ದೇಶದಾದ್ಯಂತ ಆಯೋಜಿಸಲಾಗಿದೆ. ಸಮಾಜದ ಗಣ್ಯಮಾನ್ಯರು, ನೀತಿ ನಿರೂಪಕರು ಹಾಗೂ ಸಮಾಜಸೇವಕರೊಂದಿಗಿನ ಸಂವಾದವನ್ನು ಸಂಘವು ನೂರನೇ ವರ್ಷದಲ್ಲೂ ಮುಂದುವರಿಸಿದ್ದು, ಬೆಂಗಳೂರಿನಲ್ಲಿ ಇದೇ ನವೆಂಬರ್ 8 ಹಾಗೂ 9 ರಂದು ಸರಸಂಘಚಾಲಕರಾದ ಡಾ|| ಮೋಹನ್ ಭಾಗವತ್ ಅವರು ವಿಶೇಷ ಉಪನ್ಯಾಸಮಾಲೆಯಲ್ಲಿ ಮಾತನಾಡಲಿದ್ದಾರೆ.
ಶತಾಬ್ದಿ ವರ್ಷದಲ್ಲಿ ದೇಶದ 4 ಕಡೆಗಳಲ್ಲಿ (ನವದೆಹಲಿ, ಬೆಂಗಳೂರು, ಮುಂಬಯಿ ಮತ್ತು ಕೊಲ್ಕತ್ತಾ) ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಎಂಬ ಶೀರ್ಷಿಕೆಯಲ್ಲಿ ಸರಸಂಘಚಾಲಕ ಡಾ|| ಮೋಹನ್ ಭಾಗವತ್ ಅವರು ಈ ಉಪನ್ಯಾಸಮಾಲೆಗಳನ್ನು ನಡೆಸಿಕೊಡಲಿದ್ದಾರೆ. ನವದೆಹಲಿಯಲ್ಲಿ ಕಳೆದ ಆಗಸ್ಟ್ 26, 27, 28ರಂದು ಮೊದಲ ಕಾರ್ಯಕ್ರಮ ನಡೆದಿತ್ತು.
ಈ ಉಪನ್ಯಾಸ ಮಾಲೆಯ ಎರಡನೇ ಕಾರ್ಯಕ್ರಮವು ಬೆಂಗಳೂರಿನ ಬನಶಂಕರಿಯ ಹೊಸಕೆರೆಹಳ್ಳಿ ರಿಂಗ್ ರಸ್ತೆಯಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನವೆಂಬರ್ 8 ಹಾಗೂ 9ರ ಶನಿವಾರ ಹಾಗೂ ಭಾನುವಾರಗಳಂದು ನಡೆಯಲಿದೆ.
ಆಹ್ವಾನಿತರಿಗಷ್ಟೇ ಪ್ರವೇಶವಿರುವ ಈ ಕಾರ್ಯಕ್ರಮಕ್ಕೆ ಮುಖ್ಯವಾಗಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯದಿಂದ ಸುಮಾರು 1,200 ಗಣ್ಯರನ್ನು ಆಹ್ವಾನಿಸಲಾಗಿದೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ, ಆಡಳಿತ, ಪತ್ರಿಕೋದ್ಯಮ, ಕ್ರೀಡೆ, ಉದ್ಯಮ, ಸಾಮಾಜಿಕ ಸೇವೆ, ಅಧ್ಯಾತ್ಮ ಸೇರಿದಂತೆ ಸಮಾಜದ ಬಹುತೇಕ ಎಲ್ಲ ಕ್ಷೇತ್ರಗಳಿಂದಲೂ ಸಾಧಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ನವೆಂಬರ್ 8ರ ಶನಿವಾರ ಅಪರಾಹ್ನ 4:00 ರಿಂದ 7:30ರವರೆಗಿನ ಎರಡು ಅವಧಿಗಳಲ್ಲಿ ಸರಸಂಘಚಾಲಕ ಡಾ|| ಮೋಹನ್ ಭಾಗವತ್ ಉಪನ್ಯಾಸ ನೀಡಲಿದ್ದಾರೆ. ನವೆಂಬರ್ 9ರ ಭಾನುವಾರ ಬೆಳಗ್ಗೆ 10.30 ರಿಂದ 1:30ರವರೆಗೆ ಎರಡು ಅವಧಿಗಳಲ್ಲಿ ಸಭಿಕರ ಪ್ರಶ್ನೆಗಳಿಗೆ ಡಾ|| ಮೋಹನ್ ಭಾಗವತ್ ಉತ್ತರಿಸಲಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa