
ಬೆಂಗಳೂರು, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಚಿತ್ರರಂಗದ ಪೋಷಕ ಹಾಗೂ ಖಳನಟ ಹರೀಶ್ ರಾಯ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಬೆಳಗ್ಗೆ 11 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.
ಎರಡು ದಶಕಗಳಿಗಿಂತ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಹರೀಶ್ ರಾಯ್ ಅವರು ತಮ್ಮ ವಿಶಿಷ್ಟ ಖಳನಟನೆ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ್ದರು. ವಿಶೇಷವಾಗಿ ‘ಕೆಜಿಎಫ್’ ಮತ್ತು ‘ಕೆಜಿಎಫ್ ಚಾಪ್ಟರ್ 2’ ಸಿನಿಮಾಗಳ ನಂತರ ಅವರು “ಕೆಜಿಎಫ್ ಚಾಚಾ” ಎಂದೇ ಜನಪ್ರಿಯರಾದರು.
ಹರೀಶ್ ರಾಯ್ ಅವರು 90ರ ದಶಕದಲ್ಲಿ ‘ಓಂ’, ‘ನಲ್ಲ’, ‘ಭೂಗತ’, ‘ಜೋಡಿ ಹಕ್ಕಿ’, ‘ತಾಯವ್ವ’, ‘ಸಂಜು ವೆಡ್ಸ್ ಗೀತಾ’, ‘ಸ್ವಯಂವರ’, ‘ಅಂಡರ್ ವರ್ಲ್ಡ್’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದು, ‘ಮೀಂದುಮ್ ಒರು ಕಾದಲ್ ಕಧೈ’, ‘ರಾಜ್ ಬಹದ್ದೂರ್’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ಅಭಿಮಾನಿಗಳು ಹರೀಶ್ ರಾಯ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa