ಶಾಸಕ ಮೇಟಿ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ
ವಿಜಯಪುರ, 04 ನವೆಂಬರ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಶಾಸಕ ಎಚ್‌.ವೈ. ಮೇಟಿ ಅವರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದು, ಶಾಸಕರಾಗಿ, ಸಚಿವರಾಗಿ ರಾಜ್ಯ, ಅಖಂಡ ವಿಜಯಪುರ ಜಿಲ್ಲೆ ಹಾಗೂ ಬಾಗಲಕೋಟ ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅಪಾರ ಎಂದು ಸ್ಮರಿ
ಶಾಸಕ ಮೇಟಿ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ


ವಿಜಯಪುರ, 04 ನವೆಂಬರ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಶಾಸಕ ಎಚ್‌.ವೈ. ಮೇಟಿ ಅವರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದು, ಶಾಸಕರಾಗಿ, ಸಚಿವರಾಗಿ ರಾಜ್ಯ, ಅಖಂಡ ವಿಜಯಪುರ ಜಿಲ್ಲೆ ಹಾಗೂ ಬಾಗಲಕೋಟ ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅಪಾರ ಎಂದು ಸ್ಮರಿಸಿದ್ದಾರೆ.

ಗುಳೇದಗುಡ್ಡ ಹಾಗೂ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ, ಎಚ್.ಡಿ.ದೇವೇಗೌಡ ಅವರ ಸಂಪುಟದಲ್ಲಿ ಅರಣ್ಯ ಸಚಿವರಾಗಿ, ಸಿದ್ಧರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಒಂದು ಬಾರಿ ಸಂಸದರೂ ಆಗಿದ್ದ ಮೇಟಿ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಪುನರ್ವಸತಿ ಕಂಡಿರುವ ಸಂತ್ರಸ್ತರಿಗೆ ಹಾಗೂ ನವಬಾಗಕೋಟೆ ಸಮಗ್ರ ಅಭಿವೃದ್ಧಿಗೆ ಬಿಟಿಡಿಎ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾಗಿ ಮೇಟಿ ಅವರು ರಾಜಕೀಯ ಸಾಧನೆಯನ್ನು ವಿವರಿಸಿದ್ದಾರೆ.

ಸಹಕಾರಿ ರಂಗಕ್ಕೂ ತಮ್ಮ ಕೊಡುಗೆ ನೀಡಿದ್ದ ಎಚ್.ವೈ. ಮೇಟಿ ಅವರು, ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿಯೂ ಸಹಕಾರಿ ಬಲವರ್ಧನೆಗೆ ಶ್ರಮಿಸಿದ್ದ ಅವರು, ನನ್ನ ಉತ್ತಮ ಒಡನಾಡಿಯಾಗಿದ್ದರು ಎಂದು ಗುಣಗಾನ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ಧ ಮೇಟಿ ಅವರು, ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ಮಾಡಿಸಲು ಪ್ರಯತ್ನ ನಡೆಸಿದ್ದರು ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಾಗಲಕೋಟೆ ನವನಗರದ ಒಂದನೇ ಯೂನಿಟ್‌ನಲ್ಲಿ ಸುಮಾರು ಎಂಟು ಸಾವಿರ ಮರಗಳು ಬೆಳೆದು ನಿಂತು ಉತ್ತಮ ಪರಿಸರ ಹೊಂದಲು ಎಚ್‌.ವೈ ಮೇಟಿ ಅವರು ಅರಣ್ಯ ಸಚಿವರಾಗಿದ್ದಾಗ ಕೈಗೊಂಡ ಪರಿಸರ ಕಾಳಜಿಯ ದೂರಗಾಮಿ ನಿಲುವು ಕಾರಣ. ಹೀಗೆ ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಇನ್ನೂ ಹತ್ತಾರು ಕನಸುಗಳನ್ನು ಕಂಡಿದ್ದ ಮೇಟಿ ಅವರ ಅಗಲುವಿಕೆಯಿಂದ ಹಿನ್ನಡೆ ಅನುಭವಿಸಿದಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಭಗವಂತ ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಹಿರಿಯನ ಅಗಲಿಕೆಯ ನೋವು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande