
ವಿಜಯಪುರ, 04 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯಾದ್ಯಂತ ಕಬ್ಬು ಬೆಲೆ ನಿಗಧಿ ಕುರಿತಾಗಿ ರೈತರು ತೋರಿಸುತ್ತಿರುವ ಆತಂಕ ಮತ್ತು ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಬ್ಬಿಗೆ ನ್ಯಾಯಸಮ್ಮತ ದರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ರೈತರ ಹಿತದೃಷ್ಟಿಯಿಂದ ಕೇಂದ್ರದ ನಿಗದಿತ ದರ ನೀಡಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಜಿಲ್ಲೆಗೆ ಕಬ್ಬಿನ ಇಳುವರಿ ವ್ಯತ್ಯಾಸ ಇರುವುದರಿಂದ ದರದಲ್ಲೂ ಅಲ್ಪ ವ್ಯತ್ಯಾಸ ಉಂಟಾಗಬಹುದು. ಕೃಷ್ಣೆ ಮತ್ತು ಕಾವೇರಿ ಕಣಿವೆಯಲ್ಲಿ ಇಳುವರಿ ಹೆಚ್ಚು ಇರುವ ಕಾರಣ ಅಲ್ಲಿ ಕೆಲವು ಅಸಮಾನತೆಗಳು ಕಂಡುಬರುತ್ತಿವೆ. ಕಾರ್ಖಾನೆಗಳು ಸುಗಮವಾಗಿ ನಡೆಯಲು ರೈತರು ಮತ್ತು ಕಾರ್ಖಾನೆ ಮಾಲೀಕರು ಪರಸ್ಪರ ಸಹಕಾರ ನೀಡಬೇಕು. ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ಇನ್ನೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸುವ ಕಾರ್ಯ ನಡೆಯುತ್ತಿದೆ. ಕಬ್ಬು ಕಡಿಯುವವರು ರೈತರಿಗಿಂತಲೂ ಬಡವರು; ಅವರು ಉತ್ತರ ಕರ್ನಾಟಕಕ್ಕೆ ಬಂದು ಕೇವಲ 10 ದಿನಗಳಷ್ಟೇ ಆಗಿದೆ. ಈಗಾಗಲೇ ಕೆಲವೆಡೆ ಕಾರ್ಖಾನೆಗಳು ಕಾರ್ಯಾರಂಭ ಮಾಡಿವೆ. ಬೆಳಗಾವಿಯಲ್ಲೂ ಸಮಸ್ಯೆ ಬಗೆಹರಿಯುವ ಹಂತದಲ್ಲಿದೆ. ರಾಜೀವ ಅವರು ಹೆಚ್ಚು ದರ ನೀಡುವ ಭರವಸೆ ನೀಡಿರುವುದರಿಂದ ಹೋರಾಟ ಮುಂದುವರಿಯುತ್ತಿರುವುದು ಸಹಜ. ಆದರೆ ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆಯನ್ನು ಶಾಂತಿಯುತವಾಗಿ ಮುಗಿಸಿಕೊಳ್ಳಬೇಕು ಎಂದರು. ರಸ್ತೆ ಮಧ್ಯೆ ಪ್ರತಿಭಟನೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸಮಸ್ಯೆಗಳನ್ನು ಸಾಮರಸ್ಯದಿಂದ ಪರಿಹರಿಸಿಕೊಳ್ಳುವುದು ಅಗತ್ಯ. ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುವುದರಿಂದಲೇ ಕಬ್ಬಿಗೆ ಉತ್ತಮ ದರ ದೊರೆಯುತ್ತಿದೆ; ಇಲ್ಲದಿದ್ದರೆ 700–800 ರೂ. ಕ್ಕೆ ಕಬ್ಬು ಮಾರಾಟವಾಗುವ ಪರಿಸ್ಥಿತಿ ಉಂಟಾಗುತ್ತಿತ್ತು. ಕಬ್ಬು ಉಳಿಸಲು ರೈತರು ತಮ್ಮ ಹಾನಿಯನ್ನೇ ಮಾಡಿಕೊಂಡುಕೊಳ್ಳಬಾರದು ಎಂದರು. ಇನ್ನೂ ಮಾಜಿ ಸಚಿವ ನಿರಾಣಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಸಕ್ಕರೆ ರಫ್ತು ಸಮಸ್ಯೆ, ಎಥನಾಲ್ ಉತ್ಪಾದನೆ ಕುಸಿತ ಹಾಗೂ ಸಕ್ಕರೆ ದರ ಏರಿಕೆ ಕುರಿತ ಮನವಿ ಸಲ್ಲಿಸಿದ್ದಾರೆ. ಸಕ್ಕರೆ ಉತ್ಪಾದನೆಯೊಂದಿಗೆ ಸಂಬಂಧಿಸಿದ ಅನೇಕ ಅಂಶಗಳ ಕಾರಣದಿಂದ ಕಾರ್ಖಾನೆಗಳಿಗೆ ಹೆಚ್ಚಿನ ದರ ನೀಡುವುದು ಕಷ್ಟಕರವಾಗಿದೆ ಎಂದರು. ರೈತರು ಎಷ್ಟೇ ಕಳವಳಗೊಂಡಿದ್ದರೂ, ಸರ್ಕಾರ ಅವರ ಪಕ್ಕದಲ್ಲಿದೆ. ಸಾಮರಸ್ಯದಿಂದ ಬಗೆಹರಿಸಿಕೊಂಡರೆ ಶೀಘ್ರ ಪರಿಹಾರ ಸಾಧ್ಯ ಎಂದರು ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೋರಾಟ ದಲ್ಲಿ ಭಾಗಿಯಾಗಿದ್ದ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಉಂಟಾದ ಗೊಂದಲ ತಪ್ಪು ಕಲ್ಪನೆಯಿಂದ ಉಂಟಾಗಿದೆ. ವಿಜಯೇಂದ್ರ ಅವರು ಸ್ಥಳಕ್ಕೆ ಬಂದಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅಗತ್ಯವಿದ್ದರೆ ನಾವು ಎಲ್ಲರೂ ಸೇರಿ ಕೇಂದ್ರದವರನ್ನು ಭೇಟಿಯಾಗಲು ಸಿದ್ಧ ಎಂದರು. ಡಿಸಿಯವರೂ ಸ್ಥಳಕ್ಕೆ ತೆರಳಿ ರೈತರ ಮನವಿಯನ್ನು ಸ್ವೀಕರಿಸಿದ್ದಾರೆ. ಈಗ ಈ ವಿಷಯ ಇಲ್ಲಿಯೇ ಮುಗಿಯಬೇಕು. ರಾಜ್ಯ ಸರ್ಕಾರ ಕೇಂದ್ರದ ಮಾರ್ಗದರ್ಶನದಡಿಯಲ್ಲಿ ಕೆಲಸ ಮಾಡುತ್ತಿದ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande