
ರಾಯಚೂರು, 04 ನವೆಂಬರ್ (ಹಿ.ಸ.) :
ಆ್ಯಂಕರ್ : ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಅರ್ಹ ಶಿಕ್ಷಕರೆಲ್ಲರೂ ನೋಂದಣಿ ಮಾಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ್ ಅವರು ಹೇಳಿದ್ದಾರೆ.
ನಗರದ ಬೆಸ್ಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ- 2026ರ ಮತದಾರರ ವಿಶೇಷ ಮಿಂಚಿನ ನೋಂದಣಿ ಮೂರನೇ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಹತೆ ಪಡೆದ ಯಾರು ಸಹ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಅದಕ್ಕಾಗಿ ನಮೂನೆ 19ನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಹೇಳಿದರು. ಕರ್ನಾಟಕ ಈಶಾನ್ಯ ಕ್ಷೇತ್ರದ ಮತದಾರರ ಪಟ್ಟಿ ತಯಾರಿಗೆ ಎಲ್ಲರೂ ಸಹಕಾರ ನೀಡಿ ನಿರ್ದಿಷ್ಟ ಪಡಿಸಿದ ಕಾಲಮಿತಿಯಲ್ಲಿ ಶೇಕಡ 100ರಷ್ಟು ಗುರಿ ತಲುಪಲು ಹೆಸರು ನೋಂದಣಿಗೆ ಸಹಕಾರ ನೀಡಬೇಕು ಎಂದರು.
ಈ ವೇಳೆ ಮತದಾರ ಸಾಕ್ಷರತಾ ಕ್ಲಬನ ನೋಡಲ್ ಅಧಿಕಾರಿ ಡಾ.ದಂಡಪ್ಪ ಬಿರಾದಾರ್ ಅವರು ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳಲ್ಲಿ 2025 ನವೆಂಬರ 1ಕ್ಕೆ ಆರು ವರ್ಷ ಅವಧಿಯಲ್ಲಿ ಒಟ್ಟು ಕನಿಷ್ಠ ಮೂರು ವರ್ಷ ಬೋಧನಾ ವೃತ್ತಿಯಲ್ಲಿ ನಿರತರಾಗಿರಬೇಕು. ಈ ಬಗ್ಗೆ ಆಯಾ ಶೈಕ್ಷಣಿಕ ಸಂಸ್ಥೆಗಳಿಂದ ಅನುಬಂಧ-2ರಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು. ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ ಸಲ್ಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸೋಮಶೇಖರಪ್ಪ ಹೋಕ್ರಾಣಿ, ದೈಹಿಕ ಶಿಕ್ಷಣ ವಿಭಾಗದ ಅಧಿಕಾರಿ ರಂಗಸ್ವಾಮಿ, ಬೇಸ್ಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶೇಕ್ ಮುಸ್ಕಾನ್, ಮಾನವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಂಟೆಪ್ಪ, ರವೀಂದ್ರ ಹಾಗೂ ಇತರರು ಇದ್ದರು. ಶರಣಬಸವ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್