
ಬಳ್ಳಾರಿ, 03 ನವೆಂಬರ್ (ಹಿ.ಸ.) :
ಆ್ಯಂಕರ್: ವಿಮೆ ಹೊಂದಿದ ವಾಹನ ಕಳ್ಳತನವಾಗಿರುವುದರ ಕುರಿತು ಅರ್ಜಿ ಸಲ್ಲಿಸಿದ ಕ್ಲೈಮ್ ಅನ್ನು ತಿರಸ್ಕರಿಸಿ ಸೇವಾ ನ್ಯೂನ್ಯತೆ ಎಸಗಿದ ಬೆಂಗಳೂರಿನ ಮೆ. ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‍ಗೆ ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮೆ ಪಾವತಿಸುವಂತೆ ಆದೇಶ ನೀಡಿದೆ.
ದೂರುದಾರನಾದ ಬಳ್ಳಾರಿ ತಾಲ್ಲೂಕಿನ ಹೊಸ ಎರ್ರಗುಡಿ ಗ್ರಾಮದ ಡಿ. ಪ್ರತಾಪ್ ರೆಡ್ಡಿ ತಮ್ಮ ಕೆ.ಎ 34/ಇ ಎಸ್-5099 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನಕ್ಕೆ 14-08-2023 ರಿಂದ 13-08-2024 ರ ವರೆಗಿನ ಅವಧಿಗೆ ಪಾಲಿಸಿ ಸಂಖ್ಯೆ: 779855593 ರಂತೆ ವಿಮೆ ಪಾಲಿಸಿ ಪಡೆದಿದ್ದು, ಚಾಲ್ತಿಯಲ್ಲಿರುವ ಅವಧಿಯಲ್ಲಿ 29-04-2024 ಸಂಜೆ 7.30 ಕ್ಕೆ ಮನೆಯ ಮುಂದೆ ನಿಲ್ಲಿಸಿದ ಗಾಡಿಯು ಕಳ್ಳತನವಾಗಿತ್ತು.
ಗಾಡಿ ಕಳ್ಳತನವಾಗಿರುವ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ, ಮಾಹಿತಿಯೊಂದಿಗೆ ಇನ್ಸೂರೆನ್ಸ್ ಕಂಪನಿಗೆ ಕ್ಲೈಮ್ ಅರ್ಜಿ ಸಲ್ಲಿಸಿದ್ದರು. ಆದರೆ ಕ್ಲೈಮ್ ಅನ್ನು ಕಂಪನಿ ತಿರಸ್ಕರಿಸಿತ್ತು. ಬಳಿಕ ದೂರುದಾರರು ರೂ.76,200/- ಗಳೊಂದಿಗೆ ನಷ್ಟ ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದಲ್ಲಿ ಇನ್ಶೂರೆನ್ಸ್ ಕಂಪನಿಯು ಹಾಜರಾಗಿ ತಮ್ಮ ತಕರಾರು ಮೂಲಕ ವಿಮಾ ಕಂತನ್ನು ಕಳ್ಳತನವಾದ 48 ಗಂಟೆಯೊಳಗೆ ಮಾಹಿತಿ ನೀಡಬೇಕಿದ್ದು, ಮೋಟರ್ ವಾಹನ ಕಾಯ್ದೆ 1988ರ ನಿಯಮಾನುಸಾರ 48 ಗಂಟೆಯೊಳಗೆ ಎದುರುದಾರರಿಗೆ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿರುವ ಕಾರಣ ಕ್ಲೈಮ್ ತಿರಸ್ಕರಿಸಿರುವುದಾಗಿ ಸಮರ್ಥಿಸಿಕೊಂಡಿದೆ.
ಪ್ರಕರಣದಲ್ಲಿ ಆಯೋಗದ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ ಹಾಗೂ ಮಹಿಳಾ ಸದಸ್ಯೆ ಮಾರ್ಲಾ ಶಶಿಕಲಾ ಅವರು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಯಾವ ದಿನಾಂಕಕ್ಕೆ ಮಾಹಿತಿ ನೀಡಿರುವರೆಂಬ ಬಗ್ಗೆ ಉಭಯ ಪಕ್ಷಗಾರರು ಸ್ಪಷ್ಟವಾಗಿ ದಾಖಲೆ ಸಲ್ಲಿಸಿರುವುದಿಲ್ಲ ಎಂದು ತಿಳಿಸಿದ್ದರು.
ಆದಾಗ್ಯೂ ಎದುರುದಾರರು ಪಾಲಿಸಿ ವಿತರಿಸುವ ಸಮಯದಲ್ಲಿ ಸಂಪೂರ್ಣ ನಿಬಂಧನೆಗಳನ್ನು ನೀಡದೇ ಆಯೋಗದಲ್ಲಿ ದೂರು ದಾಖಲಾದ ನಂತರ ಹಾಜರುಪಡಿಸಿ ಕ್ಲೈಮ್ ತಿರಸ್ಕರಿಸುವ ಬಗ್ಗೆ ತಕರಾರು ಸಲ್ಲಿಸುವ ಪರಿಪಾಠ ರೂಢಿಸಿಕೊಂಡಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದೆ ಎಂದು ಅಭಿಪ್ರಾಯಪಟ್ಟರು.
ಪಾಲಿಸಿ ಚಾಲ್ತಿಯಲ್ಲಿರುವ ಮತ್ತು ವಾಹನ ಕಳ್ಳತನವಾಗಿರುವ ಬಗ್ಗೆ ಒಪ್ಪಿಕೊಳ್ಳುತ್ತಾ ಕೇವಲ ಮಾಹಿತಿ ತಡವಾಗಿ ಸಲ್ಲಿಸಿರುವ ಕಾರಣಕ್ಕೆ ಕ್ಲೈಮ್ ತಿರಸ್ಕರಿಸಿರುವುದು ಎದುರುದಾರರ ಸೇವಾ ರ್ನಿಲಕ್ಷ್ಯತನ ಎಂದು ಪರಿಗಣಿಸಿ ಎದುರುದಾರರು ರೂ.76,200 ಗಳ ಪಾಲಿಸಿ ಮೊತ್ತ, ರೂ.10,000 ಮಾನಸಿಕ ಹಿಂಸೆಗೆ ಮತ್ತು ರೂ.5,000 ದೂರಿನ ವೆಚ್ಚ ದೂರುದಾರರಿಗೆ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ರೂ.76,200 ಗಳಿಗೆ ಶೇ.9 ರಷ್ಟು ಬಡ್ಡಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್