

ಕೊಪ್ಪಳ, 003 ನವೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಗಳಲ್ಲಿ ಮೂಲಭೂತ ಸೌಕರ್ಯಗಳಾದ ಪಾರ್ಕಿಂಗ್ ವ್ಯವಸ್ಥೆ, ಲೈಟಿಂಗ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಹಳ್ಳಿಯಿಂದ ಬರುವ ರೈತರಿಗೆ ತೊಂದರೆಯಾಗುತ್ತದೆ. ಇಲ್ಲಿಗೆ ಬರುವ ರೈತರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮದು. ಕೃಷಿ ಮಾರುಕಟ್ಟೆ ಅಧಿಕಾರಿ ಮತ್ತು ಕಾರ್ಯದರ್ಶಿಗಳು ಏನು ಮಾಡುತ್ತಿದ್ದೀರಾ, ಜಿಲ್ಲೆಯ ಕೆಲವು ಕಡೆ ಸ್ವಚ್ಚತೆ ಇಲ್ಲ ಈ ಕುರಿತು ಅಧಿಕಾರಿಗಳು ಎಚ್ಚೆತ್ತು ಸರಿಯಾಗಿ ಕೆಲಸ ಮಾಡದಿದ್ದರೆ ಸಂಬ0ಧಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.
ಎಲ್ಲಾ ಎಪಿಎಂಸಿ ಗಳಲ್ಲಿ ರೈತರಿಂದ ಯಾವುದೇ ರೀತಿಯ ಕಮೀಷನ್ ಪಡೆಯಬಾರದು ಎಂದು ದೊಡ್ಡದಾಗಿ ಪರ್ಮನೆಂಟ್ ಬೋರ್ಡ್ ಹಾಕಿಸಬೇಕು. ಬೆಳವಿನಾಳ ಎಪಿಎಂಸಿಯಲ್ಲಿ ಯಾವುದೇ ಸರಿಯಾದ ವ್ಯವಸ್ಥೆ ಇಲ್ಲ ಅಲ್ಲಿಗೆ ಮಾರಾಟಕ್ಕೆ ಬರುವ ರೈತರಿಗೆ ತೊಂದರೆಯಾಗುತ್ತದೆ. ಸರಿಯಾದ ರಸ್ತೆ ಸಹ ಇಲ್ಲ. ಅಲ್ಲಿ ಅಪ್ರೋಚ್ ರೋಡ್ ಮಾಡಬೇಕು ಮತ್ತು ಮಾರ್ಕೆಟ್ ಸಮಯ ಬೆಳಿಗ್ಗೆ 5:30 ರಿಂದ ಪ್ರಾರಂಭಿಸಬೇಕು. ಬರುವ ಮತ್ತೊಂದು ಸಭೆಯೊಳಗೆ ತಾವು ಮಾಡಿದ ಕೆಲಸದ ಕುರಿತು ಸಮಗ್ರ ಮಾಹಿತಿ ನೀಡಬೇಕೆಂದರು.
ಜಿಲ್ಲೆಯ ಎಪಿಎಂಸಿ ಗಳಲ್ಲಿ ಎಷ್ಟು ಸೈಟುಗಳಿವೆ, ಅವುಗಳಲ್ಲಿ ಎಷ್ಟು ಜನರು ನಿಯಮ ಉಲ್ಲಂಘನೆ ಮಾಡಿದ್ದಾರೆ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಾ, ತಾವು ಏನು ಕೆಲಸ ಮಾಡುತ್ತಿದ್ದೀರಾ, ಸರಿಯಾದ ರೀತಿಯಲ್ಲಿ ತೆರಿಗೆ ಸಂಗ್ರಹ ಮಾಡುತ್ತಿದ್ದೀರಾ, ಎಲ್ಲಾ ಕಡೆ ವೇಬ್ರಿಡ್ಜ್ ಇವೆಯಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಎಪಿಎಂಸಿ ಗಳಲ್ಲಿ ಎಷ್ಟು ರಿಜಿಸ್ಟರ್ಡ್ ಮತ್ತು ಅನ್‌ರಿಜಿಸ್ಟರ್ಡ್ ಹಮಾಲರು ಇದ್ದಾರೆ, ಅವರಿಗೆ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ವ್ಯವಸ್ಥೆ ಮಾಡಬೇಕು. ಈ ಎಲ್ಲವುಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕೆಂದು ಎಪಿಎಂಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಾನುವಾರುಗಳ ಮಾರುಕಟ್ಟೆಯ ಸಮಸ್ಯೆಗಳು ಎನಾದರೂ ಇವೆಯಾ ಎಂದು ಪಶು ಅಧಿಕಾರಿಗಳನ್ನು ಕೇಳಿದಾಗ, ಯಾವುದೇ ಸಮಸ್ಯೆಗಳಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ವೇಸ್ಟ್ ಮ್ಯಾನೇಜ್‌ಮೆಂಟ್ ಸರಿಯಾಗಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಝೀರೋ ವೇಸ್ಟ್ ಮ್ಯಾನೇಜ್‌ಮೆಂಟ್ ಇದೆ ಅದು ನಮ್ಮ ಜಿಲ್ಲೆಯಲ್ಲಿಯೂ ಆಗಬೇಕು. ಬರುವ ಮುಂದಿನ ಸಭೆಯ ಒಳಗಡೆ ಇಂದಿನ ಸಭೆಯಲ್ಲಿ ತಿಳಿಸಿದ ಎಲ್ಲಾ ಕೆಲಸಗಳಾಗಬೇಕೆಂದು ಸೂಚನೆ ನೀಡಿದರು.
ಈ ಸಭೆಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕರಾದ ಎಲ್. ಸಿದ್ದೇಶ್ವರ, ಕೃಷಿ ಮಾರಾಟ ಇಲಾಖೆಯ ಅಧಿಕಾರಿ ವೀರಭದ್ರಯ್ಯ ಹಿರೇಮಠ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಕೃಷಿ ಉತ್ಪನ್ನ ಮಾರುಕಟ್ಟೆ ಕೊಪ್ಪಳ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಹಿರೇಮಠ, ಲೀಡ್ ಬ್ಯಾಂಕ್ ಮ್ಯಾನೇಜರ್ ಮಾರುತಿ ಹಾಗೂ ಜಿಲ್ಲೆಯ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್