ಕುಷ್ಠ ರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ಯಶಸ್ವಿಗೊಳಿಸಿ : ಇಬ್ರಾಹಿಂಬಾಬು
ಬಳ್ಳಾರಿ, 03 ನವೆಂಬರ್ (ಹಿ.ಸ.) : ಆ್ಯಂಕರ್ : ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನದಲ್ಲಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡಿದಾಗ ಮನೆಯ ಸದಸ್ಯರೆಲ್ಲರು ಪರೀಕ್ಷಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಸದಸ್ಯ ಇಬ್ರಾಹಿಂಬಾಬು ಅವರು ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲ
ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನ ಯಶಸ್ವಿಗೊಳಿಸಿ : ಇಬ್ರಾಹಿಂಬಾಬು


ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನ ಯಶಸ್ವಿಗೊಳಿಸಿ : ಇಬ್ರಾಹಿಂಬಾಬು


ಬಳ್ಳಾರಿ, 03 ನವೆಂಬರ್ (ಹಿ.ಸ.) :

ಆ್ಯಂಕರ್ : ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನದಲ್ಲಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡಿದಾಗ ಮನೆಯ ಸದಸ್ಯರೆಲ್ಲರು ಪರೀಕ್ಷಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಸದಸ್ಯ ಇಬ್ರಾಹಿಂಬಾಬು ಅವರು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ವಿಭಾಗ ಹಾಗೂ ಮಿಲ್ಲರ್‍ಪೇಟೆ ನಗರ ಆರೋಗ್ಯ ಕೇಂದ್ರ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಮಿಲ್ಲರ್ ಪೇಟೆಯ ವಾರ್ಡ್ ನಂ.13 ರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಷ್ಠರೋಗ ಪತ್ತೆ ಹಚ್ಚುವ ಅಂದೋಲನಾ ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಸಾಂಕ್ರಾಮಿಕ ರೋಗಗಳಾದ ಪ್ಲೇಗ್, ಕಾಲಾರಾ ಇನ್ನೂ ಮುಂತಾದ ರೋಗಗಳನ್ನು ನಿರ್ಮೂಲನೆಗೊಳಿಸಿದ್ದೇವೆ. ಕುಷ್ಠರೋಗವನ್ನು ಸಹ 2027 ರೊಳಗೆ ನಿರ್ಮೂಲನೆಗೊಳಿಸಲು ನಾವೆಲ್ಲರೂ ಪಣತೊಡಬೇಕಿದೆ. ಹಾಗಾಗಿ ಆಶಾ ಕಾರ್ಯಕರ್ತೆಯರು ಸಮೀಕ್ಷೆಗೆ ಮನೆಗೆ ಬಂದಾಗ ಅವರಿಗೆ ಸಹಕರಿಸಿ ಸರಿಯಾದ ಮಾಹಿತಿ ನೀಡಬೇಕು. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುಷ್ಠರೋಗ ಸಾಂಕ್ರಾಮಿಕ ರೋಗವಾಗಿದ್ದು, ಮೈಕೋಬ್ಯಾಕ್ಟೀರಿಯಂ ಲೆಪ್ರೈ ಎಂಬ ರೋಗಾಣುವಿನಿಂದ ಬರುತ್ತದೆ, ಇದು ಚಿಕಿತ್ಸೆ ಪಡೆಯದೇ ಇರುವ ಕುಷ್ಠರೋಗಿಯು ಕೆಮ್ಮಿದಾಗ ಸೀನಿದಾಗ ತುಂತುರು ಹನಿಗಳು ಉಸಿರಾಡುವ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವಂತಹ ರೋಗವಾಗಿದ್ದು, ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಅಂಗವಿಕಲತೆಯಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಹೊಸದಾಗಿ ಕುಷ್ಠರೋಗ ಪ್ರಕರಣಗಳಿಗೆ ಉಂಟಾಗುವ ಅಂಗವಿಕಲತೆಯನ್ನು 10 ಲಕ್ಷ ಜನಸಂಖ್ಯೆಗೆ ಒಂದಕ್ಕಿಂತ ಕಡಿಮೆ ಮಾಡಲು ಮತ್ತು ಸುಪ್ತ ಕುಷ್ಠರೋಗ ಪ್ರಕರಣಗಳನ್ನು ಅತೀ ಶೀಘ್ರವಾಗಿ ಪತ್ತೆ ಹಚ್ಚಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 77 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂಸೇವಕರು ಮನೆ-ಮನೆ ಭೇಟಿ ಮಾಡಿ ಮನೆಯಲ್ಲಿರುವ 2 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕುಷ್ಠರೋಗದ ಬಗ್ಗೆ ಮಾಹಿತಿ ನೀಡಿ ಶಂಕಿತ ಪ್ರಕರಣಗಳನ್ನು ಪತ್ತೆಹಚ್ಚಿ ವೈದ್ಯಾಧಿಕಾರಿಗಳ ಹತ್ತಿರ ರೆಫರಲ್ ಫಾರಂ ನೀಡಿ ತಪಾಸಣೆ ಮಾಡಿಸಿಕೊಳ್ಳಲು ಕಳುಹಿಸಿಕೊಡುತ್ತಾರೆ. ವೈದ್ಯಾಧಿಕಾರಿಗಳು ತಪಾಸಣೆ ಮಾಡಿ ಕುಷ್ಠರೋಗ ಎಂದು ದೃಢಪಡಿಸಿದ ಮೇಲೆ ಅಗತ್ಯ ಚಿಕಿತ್ಸೆ ನೀಡುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 187327 ಮನೆಗಳು ತಪಾಸಣಾ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಸಮೀಕ್ಷೆ ಮಾಡಲು 667 ತಂಡಗಳನ್ನು ರಚಿಸಲಾಗಿದೆ. ಒಂದು ತಂಡದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂಸೇವಕರು ಒಳಗೊಂಡಿದ್ದು, ಈ ತಂಡಗಳ ಮೇಲ್ವೀಚಾರಣೆಗೆ 67 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರು ಕಂಡ ಕನಸು “ಕುಷ್ಠರೋಗ ಮುಕ್ತ ಭಾರತ” ನನಸು ಮಾಡಲು ಎಲ್ಲರ ಸಹಕಾರ ಮತ್ತು ಸಹಭಾಗಿತ್ವ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕುಷ್ಠರೋಗ ನಿರ್ಮೂಲನೆ ಕುರಿತ ಭಿತ್ತಿಪತ್ರಗಳನ್ನು ಗಣ್ಯರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಅಬ್ದುಲ್ಲಾ, ಮಿಲ್ಲರ್ ಪೇಟೆಯ ವೈದ್ಯಾಧಿಕಾರಿಗಳಾದ ಡಾ.ನವೀನ್ ಕುಮಾರ್, ಡಾ.ಶೋಭ, ಬಿಸಿಲಹಳ್ಳಿಯ ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಹರೀಶ, ಯುನಾನಿ ವೈದ್ಯಾಧಿಕಾರಿ ಡಾ.ಜೈನುಲ್ಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮುಸ್ತಕ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಾನಪ್ಪ, ಪಂಪಯ್ಯ ಸೇರಿದಂತೆ ಆರೋಗ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande