
ಕೊಪ್ಪಳ, 03 ನವೆಂಬರ್ (ಹಿ.ಸ.) :
ಆ್ಯಂಕರ್ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕೇಂದ್ರ ಪುರಸ್ಕೃತ ರಾಷ್ಟಿಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ರಾಜ್ಯಾದ್ಯಂತ 8ನೇ ಸುತ್ತಿನ ಕಾಲುಬಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ನವೆಂಬರ್ 3 ರಿಂದ ಡಿಸೆಂಬರ್ 2 ರವರೆಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ 2.45 ಲಕ್ಷ ಜಾನುವಾರುಗಳಿಗೆ (ದನಗಳು ಮತ್ತು ಎಮ್ಮೆಗಳು) ಉಚಿತವಾಗಿ ಕಾಲುಬಾಯಿ ರೋಗ ನಿರೋಧಕ ಲಸಿಕೆಯನ್ನು ಹಾಕಲಾಗುತ್ತದೆ. ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲ್ಲೂಕುವಾರು, ಗ್ರಾಮವಾರು ತಯಾರಿಸಲಾಗಿದ್ದು, ಪಶುಪಾಲನಾ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನೊಳಗೊ0ಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು.
ಕಾಲುಬಾಯಿ ಜ್ವರ ರೋಗವು ದನ, ಎಮ್ಮೆ, ಹಂದಿ, ಜಿಂಕೆ ಮತ್ತು ಇತರೆ ಸೀಳು ಗೊರಸಿನ ರಾಸುಗಳಲ್ಲಿ ಪಿಕಾರ್ನೋ ವೈರಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಈ ರೋಗವು ಅಂಟು ಜಾಡ್ಯವಾಗಿದ್ದು, ರೋಗಗ್ರಸ್ತ ರಾಸುವಿನ ಸಂಪರ್ಕ, ಆಹಾರ, ಗಾಳಿ ಮತ್ತು ನೀರಿನ ಮೂಲಕ ರಾಸುವಿನಿಂದ ರಾಸುವಿಗೆ ಹರಡುತ್ತದೆ. ಕಾಲುಬಾಯಿ ಜ್ವರದ ರೋಗೋದ್ರೇಕಗಳಲ್ಲಿ ಕೆಲವೊಮ್ಮೆ ಜಾನುವಾರುಗಳು ಮರಣವನ್ನಪ್ಪುತ್ತವೆ.
ರೋಗದಿಂದ ಚೇತರಿಸಿಕೊಂಡ ರಾಸುಗಳು ಉತ್ಪನ್ನ ಸಾಮರ್ಥ್ಯ ಕಡಿಮೆಯಾಗುವುದಲ್ಲದೆ, ಹಸು, ಎಮ್ಮೆಗಳಲ್ಲಿ ಗರ್ಭಕಟ್ಟುವ ತೊಂದರೆಗಳು ಉಂಟಾಗುತ್ತವೆ. ಗರ್ಭಪಾತ ಉಂಟಾಗುವ ಸಂಭವವಿರುತ್ತದೆ. ಹೋರಿ, ಎತ್ತುಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸುತ್ತದೆ. ಇದರಿಂದ ರೈತರಿಗೆ ಆರ್ಥಿಕ ನಷ್ಠ ಉಂಟಾಗುತ್ತದೆ. ಆದ್ದರಿಂದ ಕಾಲುಬಾಯಿ ಜ್ವರದ ವಿರುದ್ದ ನಿಯಮಿತವಾಗಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ರೋಗವನ್ನು ತಹಬಂದಿಗೆ ತರಬಹುದಾಗಿದೆ.
ಲಸಿಕೆ ಹಾಕುವುದರಿಂದ ಹಾಲು ಕಡಿಮೆಯಾಗುವುದಾಗಲೀ ಅಥವಾ ಗರ್ಭಪಾತವಾಗುವುದಾಗಲೀ ಇರುವುದಿಲ್ಲ. ಯಾವುದೇ ಮೂಢನಂಬಿಕೆ ಅಥವಾ ತಪ್ಪು ಗ್ರಹಿಕೆಗೆ ಒಳಗಾಗದೆ ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಲು ಕೋರಲಾಗಿದೆ. ಕಾಲುಬಾಯಿ ರೋಗದ ಲಸಿಕೆಯ ಜೊತೆ ಜೊತೆಗೆ ಚರ್ಮಗಂಟು ರೋಗಕ್ಕೂ ಸಹ ಲಸಿಕೆಯನ್ನು ಹಾಕಲಾಗುತ್ತದೆ. ಕಾಲುಬಾಯಿ ಜ್ವರ ರೋಗನಿರೋಧಕ ಲಸಿಕೆ ಹಾಕಿಸಿ ಜಾನುವಾರುಗಳನ್ನು ರಕ್ಷಿಸಿ ಎಂದು ಪಶುಪಾಲನಾ ಪತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಪಿ.ಎಂ.ಮಲ್ಲಯ್ಯ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್