
ರಾಯಚೂರು, 21 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಪ್ರೀತಮ್ ಬಿ.ಯಶವಂತ ಅವರು ರಾಯಚೂರು ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿ, ಅಂಗನವಾಡಿಗಳಲ್ಲಿನ ಶೈಕ್ಷಣಿಕ ಸ್ಥಿತಿಗತಿ, ಐಸಿಡಿಎಸ್ ಮತ್ತು ಇತರೆ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಮೊದಲಿಗೆ ರಾಯಚೂರು ಗ್ರಾಮೀಣ ಪ್ರದೇಶದ ಎಲೆಬಿಚ್ಯಾಲಿ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡುವ ಸೌಕರ್ಯಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದುಕೊಂಡು, ಕೇಂದ್ರದಲ್ಲಿ ಸಿದ್ಧಪಡಿಸಿದ್ದ ಆಹಾರದ ಗುಣಮಟ್ಟ ಪರಿಶೀಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾಪೂರ್ವ ಶಿಕ್ಷಣದ ಬಗ್ಗೆ ತರಬೇತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿ ಅಂಗನವಾಡಿ ಕೇಂದ್ರಗಳಲ್ಲಿನ ಇಸಿಸಿ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು.
ಅಂಗನವಾಡಿಗಳಲ್ಲಿನ 5 ರಿಂದ 6 ವರ್ಷದ ಮಕ್ಕಳಿಗೆ ಚಿತ್ರಕಲೆ ಬಿಡಿಸುವುದು, ಅಕ್ಷರ ಅಭ್ಯಾಸ ಮಾಡಿಸುವುದು ಮತ್ತು ವಾರದ ಚಟುವಟಿಕೆಗಳನ್ನು ನಡೆಸುವ ಪುಸ್ತಕಗಳನ್ನು ಪರಿಶೀಲಿಸಿ ಶಾಲಾ ಪೂರ್ವ ಶಿಕ್ಷಣದ ತರಬೇತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಗನವಾಡಿ ಕಟ್ಟಡವನ್ನು ಯಾವ ವರ್ಷದಲ್ಲಿ ನಿರ್ಮಾಣ ಮಾಡಲಾಗಿದೆ? ಘಟಕದ ವೆಚ್ಚ ಎಷ್ಟು? ಯಾವ ಯೋಜನೆಯಲ್ಲಿ ನಿರ್ಮಾಣ ಮಾಡಲಾಗಿದೆ? ಎಂದು ಕೇಳಿ ಕಟ್ಟಡದ ಗುಣಮಟ್ಟ ಹಾಗೂ ಅಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.
ಬಳಿಕ ಅವರು ಹಂಚಿನಾಳ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಮಕ್ಕಳಿಗೆ ನೀಡುವ ಮಿಲ್ಲೆಟ್ ಲಾಡುವಿನ ಗುಣಮಟ್ಟ ಮತ್ತು ಅದರ ರುಚಿಯನ್ನು ಪರಿಶೀಲಿಸಿದರು. ಕೇಂದ್ರದಲ್ಲಿ ಸೋಲಾರ್ ವಿದ್ಯುತ್ ಅಳವಡಿಸಿರುವುದನ್ನು ಗಮನಿಸಿ ಇದು ಉತ್ತಮವಾದ ಬೆಳವಣಿಗೆ ಆಗಿದ್ದು, ಈ ರೀತಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸೋಲಾರ್ ವ್ಯವಸ್ಥೆ ಮಾಡಿಸುವ ಬಗ್ಗೆ ಗಮನ ಹರಿಸಿ ಎಂದು ತಿಳಿಸಿದರು.
ಬಳಿಕ ರಾಯಚೂರು ನಗರ ಯೋಜನೆಯ ಸಿಯಾತಲಾಬ್ ಬಡಾವಣೆಯ 02 ಅಂಗನವಾಡಿ ಕೇಂದ್ರಗಳಿಗೆ ಸಹ ದಿಢೀರ್ ಭೇಟಿ ನೀಡಿದರು. ಅಂಗನವಾಡಿ ಕೇಂದ್ರವು ಬಾಡಿಗೆ ಕಟ್ಟಡದಲ್ಲಿರುವುದನ್ನು ಗಮನಿಸಿ, ಈ ಕಟ್ಟಡಕ್ಕೆ ಎಷ್ಟು ಬಾಡಿಗೆ ನೀಡಲು ಅವಕಾಶವಿದೆ ಎಂದು ಕೇಳಿದರು.
ಎರಡೂ ಕೇಂದ್ರಗಳಲ್ಲಿನ ಆಹಾರ ಧಾನ್ಯಗಳ ಬಗ್ಗೆ ಪರಿಶೀಲಿಸಿದರು. ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹೆಚ್ಚಿನ ಪೌಷ್ಟಿಕಾಂಶ ಹೊಂದಿರುವ ಆಹಾರವನ್ನು ಮಕ್ಕಳಿಗೆ ನೀಡಲು ಹಾಗೂ ಚಿಕಿತ್ಸೆಗಾಗಿ ಮಕ್ಕಳನ್ನು ಎನ್.ಆರ್.ಸಿ ಕೇಂದ್ರಕ್ಕೆ ಕಳುಹಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಅಂಗನವಾಡಿ ಮಕ್ಕಳ ಶಾಲಾಪೂರ್ವ ಚಟುವಟಿಕೆಗಳ ಬಗ್ಗೆ ಕೇಳಿದರು. ಅಂಗನವಾಡಿಗಳಲ್ಲಿ ಪ್ರತಿ ದಿನ ನಡೆಯುವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಕ್ಕಳು ಹಾಡಿನ ಮೂಲಕ ಪ್ರದರ್ಶಿಸಿದ್ದನ್ನು ಗಮನಿಸಿ ಸಂತಷ ವ್ಯಕ್ತಪಡಿಸಿದರು.
ಕ್ರಿಯಾಶೀಲರಾಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದಿಸಿದರು. ನಮ್ಮ ದೇಶದಲ್ಲಿ ಈ ರೀತಿಯಾಗಿ ಅಂಗನವಾಡಿ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಣೆಯಾಗಬೇಕಿದೆ ಎಂದು ಸಲಹೆ ಮಾಡಿದರು.
ಬಳಿಕ ಅವರು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯ ರಾಯಚೂರು ವಿಜ್ಞಾನ ಸಂಶೋಧನಾ ಕೇಂದ್ರ ರಿಮ್ಸ್ ಆಸ್ಪತ್ರೆಯಲ್ಲಿ ನಡೆಯುವ ಒನ್ ಸ್ಟಾಪ್ ಸೆಂಟರ್‌ಗೆ ಭೇಟಿ ನೀಡಿದರು. ಹೊಸದಾಗಿ ನಿರ್ಮಿಸಿದ ಕಟ್ಟಡವನ್ನು ಪರಿಶೀಲಿಸಿ ಕಟ್ಟಡದ ಹೊರಭಾಗದ ಗೋಡೆಯ ಮೇಲೆ ಮಹಿಳೆಯರ ಕಾರ್ಯಕ್ರಮಗಳ ಬಗ್ಗೆ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಪ್ರಚಾರದ ಬರೆಹ ಬರೆಯಿಸಲು ಸೂಚನೆ ನೀಡಿದರು.
ಸಖಿ ಒನ್ ಸ್ಟಾಪ್ ಸೆಂಟರ್ ಡ್ಯಾಶ್ ಬೋರ್ಡ್ ವೀಕ್ಷಿಸಿ, ಪ್ರತಿದಿನ ಅಪಡೇಟ್ ಮಾಡಲು ತಿಳಿಸಿದರು. 05 ವರ್ಷಗಳಲ್ಲಿ ದಾಖಲಾದ ಕೆಸ್‌ಗಳ ಬಗ್ಗೆ ಪರಿಶೀಲಿಸಿ, ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ 08 ಜನ ಸಿಬ್ಬಂದಿಯ ಮಾಹಿತಿ ಪಡೆದುಕೊಂಡರು.
ಸಹಾಯಕ್ಕಾಗಿ ಬರುವ ಸಂಕಟದಲ್ಲಿರುವ ಮಹಿಳೆಯರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಮತ್ತು ಅಗತ್ಯ ಕಾನೂನು ನೇರವು ನೀಡಲು ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಿದರು.
ಆಡಳಿತಾಧಿಕಾರಿಗಳು, ಮಹಿಳೆಯರಿಗೆ ಉತ್ತಮ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಿದರು. ಕೆಲಸದಲ್ಲಿ ಯಾವುದೇ ರೀತಿಯ ನಿರ್ಲಕ್ಷತೆಯನ್ನು ಸಹಿಸಲಾಗುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬಳಿಕ ಎಂ.ಎಸ್.ಪಿ.ಟಿ.ಸಿ ಕೇಂದ್ರಕ್ಕೆ ಭೇಟಿ ನೀಡಿದರು. ಕೇಂದ್ರದಲ್ಲಿದ್ದ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿದರು. ಆಹಾರ ಖರೀದಿಸುವ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡರು.
ಆಹಾರದ ಪೊಟ್ಟಣಗಳ ಸಿದ್ದಪಡಿಸುವಿಕೆ ಮತ್ತು ಪೊಟ್ಟಣದಲ್ಲಿ ಇರಿಸಿದ ಆಹಾರ ಪದಾರ್ಥಗಳ ಸರಿಯಾದ ಪ್ರಮಾಣದ ತೂಕದ ಬಗ್ಗೆ ಎಂ.ಎಸ್.ಪಿ.ಟಿ.ಸಿ ಯ ಸದಸ್ಯರೊಂದಿಗೆ ಚರ್ಚಿಸಿದರು.
ನಿಮಗೆ ಸರಿಯಾದ ಸಮಯಕ್ಕೆ ಗೌರವಧನ ಸಿಗುತ್ತಿದೆಯೇ ಎಂದು ಸಿಬ್ವಂದಿಗೆ ಕೇಳಿದರು. ಎಂ.ಎಸ್.ಪಿ.ಟಿ.ಸಿಯಲ್ಲಿದ್ದ ಯಂತ್ರಗಳ ಬಗ್ಗೆ ಇದೆ ವೇಳೆ ಪರಿಶೀಲಿಸಿದರು.
ಬಳಿಕ, ನಗರದ ಸ್ವಾಧಾರ ಕೇಂದ್ರಕ್ಕೆ ಭೇಟಿ ನೀಡಿ, ಕಟ್ಟಡ ನಿರ್ಮಾಣ, ವಿನ್ಯಾಸದ ಬಗ್ಗೆ ಮಹಿಳಾ ಮಂಡಲದ ಸದಸ್ಯರಿಗೆ ವಿಚಾರಿಸಿದರು.
ಸ್ವಾಧಾರ ಕೇಂದ್ರದಲ್ಲಿ ದಾಖಲಾಗಿರುವ ಸಂಕಷ್ಟ ಮಹಿಳೆಯರನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ಮತ್ತು ಅವರಿಗೆ ನೀಡಲಾಗುವ ಊಟೋಪಚಾರ, ದಿನನಿತ್ಯದ ಬಳಕೆ ಸಾಮಗ್ರಿಗಳ ಬಗ್ಗೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಸರಿಯಾಗಿ ದೊರೆಯುತ್ತಿದೆಯೇ ಎಂದು ವಿಚಾರಿಸಿದರು.
ಸ್ವಾಧಾರ ಕೇಂದ್ರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಲು ಮತ್ತು ಮಹಿಳೆಯರಿಗೆ ಅಗತ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಸಂಸ್ಥೆಯು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಸ್ವಾಧಾರ ಕೇಂದ್ರದ ಹೊರಗಡೆ ಹೋದ ಮೇಲೆ ಆರ್ಥಿಕವಾಗಿ ಸ್ವಾವಲಂಭಿಯಾಗಿ ಬದುಕಲು ಅಗತ್ಯವಿರುವ ತರಬೇತಿ ಪಡೆದುಕೊಳ್ಳಲು, ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಇಚ್ಚೆಯಿದ್ದಲ್ಲಿ ಶಿಕ್ಷಣದ ಬಗ್ಗೆ ಗಮನ ಹರಿಸಲು ಮತ್ತು ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಇದೆ ವೇಳೆ ಮಹಿಳೆಯರಿಗೆ ಪ್ರಿತಮ್ ಬಿ.ಯಶವಂತ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಯಚೂರು ಜಿಲ್ಲಾ ಉಪ ನಿರ್ದೇಶಕರಾದ ನವೀನಕುಮಾರ ಹಾಗೂ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್