


ಬಳ್ಳಾರಿ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ವಕೀಲ ವೃತ್ತಿಯೂ ಸ್ವತಂತ್ರವಾದ ವೃತ್ತಿಯಾಗಿದ್ದು, ಕಾನೂನು ಕ್ಷೇತ್ರದಲ್ಲಿ ತುಂಬಾ ಅವಕಾಶಗಳು ಇದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ.ಡಾ.ಸಿ.ಎಸ್.ಪಾಟೀಲ್ ಅವರು ಹೇಳಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಬೆಂಗಳೂರು ಹಾಗೂ ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯ ಬಳ್ಳಾರಿ ಇವರ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಕಾನೂನು ಕಾಲೇಜುಗಳ ಕಾನೂನು ವಿದ್ಯಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಕಲಬುರಗಿ ವಲಯ ಮಟ್ಟದ “ಮಾದರಿ ವಿಧಾನ ಸಭಾ ಅಧಿವೇಶನ ಸ್ಪರ್ಧೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾನೂನು ವಿದ್ಯಾರ್ಥಿಗಳು ಸಮಾಜದಲ್ಲಿನ ತಪ್ಪುಗಳನ್ನು ಗಮನಿಸಿ ಅವುಗಳನ್ನು ತಿದ್ದುವ ಗುರುತರ ಜವಾಬ್ದಾರಿ ಇದೆ. ಕಾನೂನುಗಳ ಉದ್ದೇಶ, ಗುರಿ ಅರಿತುಕೊಳ್ಳಬೇಕು. ಕಾನೂನುಗಳನ್ನು ಅರಿತುಕೊಂಡವರು ಸೈನಿಕರಿದ್ದಂತೆ. ಕಾನೂನು ಚೌಕಟ್ಟುಗಳನ್ನು ಅರಿಯಲು ಹಿರಿಯರು, ಕಿರಿಯರು ಎನ್ನದೇ, ಸಮಾನವಾಗಿ ಚರ್ಚಿಸಬೇಕು. ಇನ್ನೊಬ್ಬರ ವಿಚಾರಧಾರೆಗಳಿಂದ ಪ್ರೇರಣೆ ಹೊಂದಬೇಕು ಎಂದರು.
ಕಾನೂನು ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗುತ್ತಿವೆ. ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು. ವೃತ್ತಿಧರ್ಮದಿಂದ ತೃಪ್ತಿ ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್ ಅವರು ಮಾತನಾಡಿ, ಸಂಸ್ಥೆಯ ಮೂಲಕ ಕಾನೂನು ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸಂಸದೀಯ ಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಗುತ್ತದೆ. ಈ ಸಂಸ್ಥೆಯು 2005 ರಲ್ಲಿ ಅಂದಿನ ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಆರಂಭಿಸಲಾಗಿತ್ತು. ಕಾನೂನು ಸಂಬ0ಧಿತ ಕರಡು ಹಾಗೂ ಮಸೂದೆಗಳನ್ನು ಮಂಡಿಸಲಾಗುತ್ತದೆ. ಇತ್ತೀಚೆಗೆ ಮುಖ್ಯಮಂತ್ರಿಯವರು “ನೂರು ಕಾನೂನುಗಳು-ನೂರು ಅಭಿಮತಗಳು” ಕೃತಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ವ್ಯಾಪ್ತಿಯಲ್ಲಿ ಬೆಂಗಳೂರು ಭಾಗದಲ್ಲಿ ಎ ಮತ್ತು ಬಿ, ಬೆಳಗಾವಿ, ಮೈಸೂರು, ತುಮಕೂರು, ಕಲಬುರಗಿ ಸೇರಿ 6 ವಲಯಗಳನ್ನಾಗಿ ಮಾಡಲಾಗಿದೆ. ವಲಯಮಟ್ಟದಿಂದ ಪ್ರತಿ ಕಾನೂನು ಕಾಲೇಜಿನಿಂದ 4 ವಿದ್ಯಾರ್ಥಿಗಳನ್ನು ಒಳಗೊಂಡ0ತೆ ಒಟ್ಟು 10 ಮಂದಿಯನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಮಾಡಲಾಗುತ್ತದೆ. ವಿಜೇತರಾದವರಿಗೆ ಬಹುಮಾನ, ಪ್ರೋತ್ಸಾಹಧನ ಇರಲಿದೆ ಎಂದು ವಿವರಿಸಿದರು.
ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಟಿ.ನರೇಂದ್ರಬಾಬು ಅವರು ಮಾತನಾಡಿ, ನೈಜ ವಿಧಾನಸಭೆ ಅಧಿವೇಶನದಂತೆ ಮಾದರಿ ವಿಧಾನಸಭೆ ಅಧಿವೇಶನ ಸ್ಪರ್ಧೆಯಲ್ಲಿ ಶೈಕ್ಷಣಿಕ ಚಟುವಟಿಕೆ, ಸಾಮಾಜಿಕ ಜವಾಬ್ದಾರಿಗಳ ಕುರಿತು ತರ್ಕಬದ್ಧವಾಗಿ ಚರ್ಚಿಸಲು ಈ ವೇದಿಕೆ ಉಪಯುಕ್ತವಾಗಲಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಹಾಂತೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ರಜನಿ ಕುಮಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಣ್ಯರನ್ನು ಸ್ವಾಗತಿಸಿದರು. ಡಾ.ರಮೇಶ್, ಡಾ.ವೆಂಕಟೇಶ್ ಮತ್ತು ಡಾ.ಸರೋಜಾ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಲಬುರಗಿ ವಲಯದ 15 ಕಾನೂನು ಕಾಲೇಜುಗಳ ಪ್ರಾಂಶುಪಾಲರು, 55 ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಳಿಕ ಸ್ಪರ್ಧೆಯಲ್ಲಿ ಪ್ರತಿ ಪಕ್ಷ, ಆಡಳಿತ ಪಕ್ಷ ಎಂದು ವಿಂಗಡಿಸಿ ಸ್ಪರ್ಧೆಗೆ ಅಣಿಗೊಳಿಸಲಾಯಿತು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಮುಖ್ಯಮಂತ್ರಿ, ಸಭಾಧ್ಯಕ್ಷ, ಮಂತ್ರಿಗಳ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಧಿವೇಶನ ಎಂದರೆ ಏನು? ಅದು ಹೇಗೆ ನಡೆಯುತ್ತದೆ. ಮಸೂದೆ ಮಂಡನೆ, ಶೂನ್ಯ ವೇಳೆ, ಪ್ರಶ್ನೋತ್ತರ ವೇಳೆ, ಚುಕ್ಕೆ ಗುರುತಿನ ಪ್ರಶ್ನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕುರಿತು ವಿವರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್