


ಕೊಪ್ಪಳ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ದೇಶದಲ್ಲಿ ಕೃಷಿ ಕ್ಷೇತ್ರದ ನಂತರ ಅತೀ ಹೆಚ್ಚು ಉದ್ಯಮವನ್ನು ಸೃಷ್ಟಿ ಮಾಡುತ್ತಿರುವ ಕ್ಷೇತ್ರ ಎಂದರೆ ಅದು ಎಂ.ಎಸ್.ಎಂ.ಇ. ಕ್ಷೇತ್ರ ಆಗಿದೆ ಎಂದು ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮನ್ಸೂರ್ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆ.ಸಿ.ಟಿ.ಯು, ಕೆ.ಎಸ್.ಎಮ್.ಸಿ ಮತ್ತು ಎ. ಬೆಂಗಳೂರು, ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಆಯೊಜಿಸಲಾಗಿದ್ದ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಉದ್ದೇಶದಿಂದ (RAMP) ಯೋಜನೆಯಡಿಯಲ್ಲಿ ಇನ್ ಕ್ಯೂಬಿಷನ್ (INCUBATION) ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಚ್ಚು ಉದ್ಯಮವನ್ನು ಸೃಷ್ಟಿಸಲು ಕೇಂದ್ರ ಸರ್ಕಾರದ ರ‍್ಯಾಂಪ್ ಯೋಜನೆಯನ್ನು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ರಾಜ್ಯಾದಂತ ಅನುಷ್ಠಾನಗೊಳಿಸುತ್ತಿದ್ದು, ಇದರ ಭಾಗವಾಗಿ ಈ ದಿನ (Incubation) ಇನ್ ಕ್ಯೂಬಿಷನ್ ಯೋಜನೆಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದ ಸದುಪಯೋಗವನ್ನು ಕೊನೆಯ ವರ್ಷದ ವಿದ್ಯಾರ್ಥಿಗಳು ಪಡೆದುಕೊಂಡು. ಮುಂದಿನ ದಿನಮಾನಗಳಲ್ಲಿ ನವ ಉದ್ಯಮ ಸ್ಥಾಪಿಸಬೇಕು ಎಂದು ಕರೆ ನೀಡಿದರು.
ಸರಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿರುಪಾಕ್ಷಿ ಬಾಗೋಡಿ ಅವರು ಕಾರ್ಯಾಗಾರ ಉದ್ಘಾಟನೆ ನೆರವೇರಿಸಿದರು.
ಕೊಪ್ಪಳದ ಕೆ.ಎಸ್.ಎಫ್.ಸಿ. ಶಾಖಾ ವ್ಯವಸ್ಥಾಪಕ ಸೋಮೇಶ ಎಂ. ಚಿಕ್ಕಮಠ ಅವರು ಕಾರ್ಯಗಾರದ ಕುರಿತು ಮಾತನಾಡಿ, ಉದ್ಯಮ ಸ್ಥಾಪಿಸುವುದು ಕಷ್ಟಕರವಾಗಿರುತ್ತದೆ. ಈ ನಿಟ್ಟಿನಿಲ್ಲಿ ಕೆ.ಎಸ್.ಎಫ್.ಸಿ. ವತಿಯಿಂದ ಶೇ.4 ರಷ್ಟು ಬಡ್ಡಿದರದಂತೆ ನವ ಉದ್ಯಮಿಗಳಿಗೆ ಸಾಲ ಸೌಲಭ್ಯ ಒದಗಿಸಿ ಪ್ರೋತ್ಸಾಹಿಸಲಾಗುತ್ತಿರುವ ಬಗ್ಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಯುವಕರು ಪಡೆದು ನವ ಉದ್ಯಮಿಗಳಾಗಲಿ ಎಂದು ಆಶಿಸಿದರು.
ಜಿಲ್ಲಾ ಎಸ್.ಬಿ.ಐ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಾರುತಿ ಅವರು ಮಾತನಾಡಿ, ಹಾಜರಿದ್ದ ವಿದ್ಯಾರ್ಥಿಗಳಿಗೆ ಉದ್ಯಮ ಪ್ರಾರಂಭಿಸಲು ಬ್ಯಾಂಕಿನ ಮೂಲಕ ಸಾಲ ಸೌಲಭ್ಯ ಪಡೆಯುವ ಕುರಿತು ಮಾಹಿತಿ ನೀಡಿದರು.
ಭಾನಾಪುರ ಮ್ಯಾನುಫ್ಯಾಕ್ಟರಿಂಗ್ ಎಂಜಿನಿಯರಿಂಗ್ ಏಕಸ್ ಲಿಮಿಟೆಡ್ ನ ಉಪಾಧ್ಯಕ್ಷ ರಾಯಪ್ಪ ಅನಂತಪಲ್ಲಿ ಅವರು ಮಾತನಾಡಿ, ಇನ್ ಕ್ಯೂಬಿಷನ್ ಕಾರ್ಯಗಾರಕ್ಕೆ ಸಂಬಂಧಿಸಿದಂತೆ ಉತ್ಪಾದನಾ ವಲಯದಲ್ಲಿ ಚಾಲ್ತಿಯಲ್ಲಿರುವ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಾಗಾರದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಸಿದ್ದಯ್ಯ ಮತ್ತು ಪ್ರಕಾಶ ಬೀಸೆರೊಟ್ಟಿ ಸೇರಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಿಬ್ಬಂದಿಗಳು, ಕೊಪ್ಪಳ ಜಿಲ್ಲೆಯ ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಹಾಗೂ ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್