
ಕೋಲಾರ, ೨೧ ನವಂಬರ್ (ಹಿ.ಸ.) :
ಆ್ಯಂಕರ್ : ಅರಣ್ಯ ಒತ್ತುವರಿ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವುದನ್ನು ಅರಣ್ಯ ಇಲಾಖೆ ತಡೆಯಬೇಕು. ಜೊತೆಗೆ ನೇರವಾಗಿ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿಯಬಾರದು. ಇದಕ್ಕಾಗಿ ರೂಪಿಸಲಾಗಿರುವ ಜಿಲ್ಲಾ ಮಟ್ಟದ ಎಸ್‌ಐಟಿ ಮೂಲಕ ರಾಜ್ಯ ಮಟ್ಟಕ್ಕೆ ಶಿಫಾರಸ್ಸು ಮಾಡಿ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್. ಸುರೇಶ್ ಅವರು ತಾಕಿತು ಮಾಡಿದರು.
ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಯೋಜನೆ (ಕೆಡಿಪಿ)ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅರಣ್ಯ ಇಲಾಖೆಯು ಏಕಪಕ್ಷಿಯ ನಿರ್ಣಯ ಕೈಗೊಂಡು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವುದಾಗಿ ಕಂಡುಬಂದಿದ್ದು, ರೈತರು ಸರ್ಕಾರದ ಮೊರೆ ಹೋಗಿದ್ದಾರೆ. ಆದ್ದರಿಂದ ಇನ್ನು ಮುಂದೆ ಎಸ್ ಐ ಟಿ ಮೂಲಕ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೋಲಾರ ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್ ಮಾತನಾಡಿ ಮಣಿಯನಹಳ್ಳಿಯಿಂದ ಕೋಲಾರ ರಸ್ತೆಯಲ್ಲಿ ರಸ್ತೆ ಅಭಿವೃದ್ಧಿ ಮಾಡುವಾಗ ಬದಿಯಲ್ಲಿ ನೆಡಲಾದ ಗಿಡಗಳಿಂದಾಗಿ ರಸ್ತೆ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಗೆ ತೊಡಕಾಗುತ್ತಿರುವ ಗಿಡಗಳನ್ನು ತಕ್ಷಣವೇ ಯಾವುದೇ ವೆಚ್ಚ ಬಾರದಂತೆ ತೆರವುಗೊಳಿಸಿ ಸ್ಥಳಾಂತರಿಸಲು ಸೂಚನೆ ನೀಡುವಂತೆ ಸಭೆಯಲ್ಲಿ ತಿಳಿಸಿದರು. ಸಚಿವರು ಅದರಂತೆ ಕ್ರಮ ಕೈಗೊಳ್ಳುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತಾಕಿತು ಮಾಡಿದರು.
ಕಳೆದ ಕೆ.ಡಿ.ಪಿ. ಸಭೆಯ ನಡಾವಳಿಯಲ್ಲಿನ ಅಂಶಗಳ ಕುರಿತು ಅನುಷ್ಠಾನ ವರದಿಯ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
ಮಾವಿಗೆ ಬೆಂಬಲ ಬೆಲೆ ವಿಳಂಬ ಮತ್ತು ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ (ಒIS)ಕುರಿತಂತೆ ಮಾವಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಪ್ರತಿ ಕೆ.ಜಿ.ಗೆ ರೂ. ೪ ಬೆಂಬಲ ಬೆಲೆ ಯೋಜನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಯೋಜನೆಯಡಿ ನೋಂದಾಯಿಸಿದ ೧೨,೩೭೨ ರೈತರಲ್ಲಿ ೧೧,೭೫೮ ರೈತರಿಗೆ ಒಟ್ಟು ರೂ. ೩೩.೩೮ ಕೋಟಿಯನ್ನು ಡಿಬಿಟಿ ಮೂಲಕ ಈಗಾಗಲೇ ಪಾವತಿಸಲಾಗಿದೆ.
ಆಧಾರ್ ಹೊಂದಾಣಿಕೆಯಾಗದಿರುವಿಕೆ ಸೇರಿದಂತೆ ಇತರೆ ತಾಂತ್ರಿಕ ಕಾರಣಗಳಿಂದಾಗಿ ೬೧೪ ರೈತರಿಗೆ ಹಣ ಪಾವತಿ ಬಾಕಿ ಉಳಿದಿರುವುದಾಗಿ ತೋಟಗಾರಿಕೆ ಉಪನಿರ್ದೇಶಕರು ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಮಾವು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಇದಕ್ಕಾಗಿ ಕಂದಾಯ ಇಲಾಖೆಯಿಂದ ಸ್ಥಳ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಶೀಘ್ರವಾಗಿ ಸ್ಥಳ ಗುರುತಿಸಲು ಸಚಿವರು ಸೂಚಿಸಿದರು.
ಕೃಷಿ ಇಲಾಖೆಯ ಎಲ್ಲಾ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಜನಪ್ರತಿನಿಧಿಗಳ ಮೂಲಕ ವಿತರಿಸಲು ಮತ್ತು ಹೋಬಳಿ ಹಾಗೂ ಗ್ರಾಮ ಮಟ್ಟದ ಕುಂದುಕೊರತೆ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಕೃಷಿ ಯಂತ್ರೋಪಕರಣಗಳು ಮತ್ತು ಸೂಕ್ಷ್ಮ ನೀರಾವರಿ ಘಟಕಗಳನ್ನು ಈಗಾಗಲೇ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನು ಇರುತ್ತದೆ ಎಂದು ಕೃಷಿ ಜಂಟಿ ನಿರ್ದೇಶಕರು ಸಭೆಯಲ್ಲಿ ತಿಳಿಸಿದರು.
ರಸಗೊಬ್ಬರ ದಾಸ್ತಾನನ್ನು ಬೇಡಿಕೆಗನುಗುಣವಾಗಿ ಪೂರೈಸಲು ಹಾಗೂ ಪ್ಯಾಕ್ಸ್ಗಳಲ್ಲಿ ರಸಗೊಬ್ಬರ ಸಿಗುವಂತೆ ಕ್ರಮ ವಹಿಸಿ ಯೂರಿಯಾ, ರಸಗೊಬ್ಬರಗಳನ್ನು ರೈತರ ಬೇಕಿಗೆ ಅನುಗುಣವಾಗಿ ಪೂರೈಸುವಂತೆ ಸಚಿವರು ತಿಳಿಸಿದರು.
ಮಾರ್ಚ್-ಏಪ್ರಿಲ್ ೨೦೨೫ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಶೇ. ೬೮.೩೭% ರಷ್ಟಿದ್ದು, ರಾಜ್ಯದಲ್ಲಿ ೧೪ನೇ ಸ್ಥಾನಕ್ಕೆ ಕುಸಿದಿರುವ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಡಿಮೆ ಫಲಿತಾಂಶ ಬಂದಿರುವ ಪ್ರಾಂಶುಪಾಲರು/ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಮುಂದಿನ ಸಾಲಿನಲ್ಲಿ ಜಿಲ್ಲೆಯನ್ನು ರಾಜ್ಯದ ಅಗ್ರ ೧೦ ಸ್ಥಾನಕ್ಕೆ ತರಲು ಸಚಿವರು ಸೂಚಿಸಿದರು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ೨೦೨೫-೨೬ನೇ ಸಾಲಿಗೆ, ಪ್ರತಿ ಶಿಕ್ಷಕರಿಗೆ ೫-೧೦ ವಿದ್ಯಾರ್ಥಿಗಳನ್ನು ದತ್ತು ನೀಡಿ ಉತ್ತೀರ್ಣರಾಗಲು ಕ್ರಮವಹಿಸುವ ಜವಾಬ್ದಾರಿ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಡಿ ಬರುವ ರೂ. ೨೫ ಕೋಟಿ ಮೊತ್ತದ ೧೫ ಗ್ರಾಮೀಣ ರಸ್ತೆ ಕಾಮಗಾರಿಗಳು ಅಧಿಕಾರಿಗಳ ವಿಳಂಬ ಮತ್ತು ಟೆಂಡರ್ ಸಮಸ್ಯೆಗಳಿಂದ ಆರಂಭವಾಗಿಲ್ಲ ಎಂದು ಮಾಲೂರು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ತಾಂತ್ರಿಕ ಕಾರಣಗಳಿಂದಾಗಿ ಮರು ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.
ಪಶುವೈದ್ಯರ ಹುದ್ದೆಗಳ ಖಾಲಿ: ಜಿಲ್ಲೆಯಲ್ಲಿ ೨೧ ಪಶುವೈದ್ಯ ಸಂಸ್ಥೆಗಳಲ್ಲಿ ೧೯ ವೈದ್ಯರ ಹುದ್ದೆಗಳು ಖಾಲಿ ಇರುವುದರಿಂದ ಸೇವೆಗಳಿಗೆ ವ್ಯತ್ಯಯವಾಗುತ್ತಿದ್ದು, ಅವುಗಳನ್ನು ಗುತ್ತಿಗೆ ಆಧಾರದ ಮೇಲೆ ತುಂಬಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಕೇವಲ ೨ ಸಂಸ್ಥೆಗಳಿಗೆ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ರಮೇಶ್ ತಿಳಿಸಿದರು.
ಕಾಲುಬಾಯಿ ರೋಗಕ್ಕಾಗಿ ಜಿಲ್ಲೆಯ ಶೇ.೫೦ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಬೀದಿನಾಯಿ ಹಾವಳಿ ನಿಯಂತ್ರಣಕ್ಕಾಗಿ ನಗರಸಭೆಗಳ ಸಹಕಾರದೊಂದಿಗೆ ಆಯಾ ಊರುಗಳ ಆಚೆ ಶೆಡ್ಗಳಿಗಾಗಿ ಸ್ಥಳ ನಿಗದಿಪಡಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಎಲ್ಲಾ ಯೋಜನೆಗಳ ಪ್ರಗತಿ ೯೭% ಇದ್ದು ಸಿಬ್ಬಂದಿ ಕೊರತೆ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್ ಸಭೆಗೆ ತಿಳಿಸಿದರು. ಕೆ.ಜಿ.ಎಫ್ ನಲ್ಲಿರುವ ಆಸ್ಪತ್ರೆಯಲ್ಲಿ ರೋಗಿಗಳ ಅಗತ್ಯಕ್ಕೆ ತಕ್ಕಂತೆ ವೈದ್ಯರ ಕೊರತೆ ಇರುವುದರಿಂದ ಹಾಗೂ ಆಸ್ಪತ್ರೆಗೆ ಈ ಹಿಂದೆ ನೀಡಲಾಗಿದ್ದ ಜಿಲ್ಲಾ ಆಸ್ಪತ್ರೆ ಸ್ಥಾನಮಾನವನ್ನು ಹಿಂತೆಗೆದು ಕೊಂಡಿರುವುದರಿಂದ ತೀವ್ರ ತೊಂದರೆಗೊಳಗಾಗಿರುತ್ತದೆ. ಆದ್ದರಿಂದ ಹಿಂದಿನ ಸ್ಥಾನ ಮಾನವನ್ನು ಕೊಟ್ಟು ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಲು ಕೆ.ಜಿ.ಎಫ್. ಶಾಸಕಿ ಡಾ. ರೂಪಕಲಾ ಶಶಿಧರ್ ಆಗ್ರಹಿಸಿದರು.
ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ನಿರ್ಮಿಸಲು ಶಾಸಕರ ಅನುದಾನ ಬಿಡುಗಡೆ ಆದ ನಂತರವೂ ವಿಳಂಬವಾಗುತ್ತಿರುವ ಕುರಿತು ಅನುಷ್ಠಾನ ಸಂಸ್ಥೆಯ ವಿರುದ್ಧ ಸಚಿವರು ಕಿಡಿ ಕಾರಿದರು.
ಇಲಾಖೆಯ ಅಡಿಯಲ್ಲಿ ಬರುವ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಅಡುಗೆ ಮಾಡುವವರು ವಾರ್ಡನ್ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ. ಇನ್ನು ಮುಂದೆ ಯಾವುದೇ ಅಡುಗೆಯವರು ವಾರ್ಡನ್ ಕೆಲಸ ಮಾಡಲು ಅವಕಾಶ ಇಲ್ಲ. ಖಾಲಿ ಇರುವ ಸ್ಥಳಗಳಲ್ಲಿ ವಾರ್ಡನ್ಗಳನ್ನು ತುಂಬಲು ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸಚಿವರು ತಿಳಿಸಿದರು.
ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರು ಮಾತನಾಡಿ ಕಳೆದ ೨ ವರ್ಷಗಳಿಂದ ಮಾಲೂರು ತಾಲ್ಲೂಕಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿಲ್ಲ ಎಂದು ದೂರಿದರು. ಅಧಿಕಾರಿಗಳು ಉತ್ತರಿಸುತ್ತಾ ಎಲ್ಲಾ ಯೋಜನೆಗಳ ಟೆಂಡರ್ ಕರೆಯಲಾಗಿದ್ದು, ಕಾರ್ಯಾದೇಶ ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಇದಕ್ಕೆ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಷ್ಟಪಟ್ಟು ಅನುದಾನ ತಂದಾಗ್ಯೂ ಅನುಷ್ಠಾನ ವಿಳಂಬವಾಗುತ್ತಿರುವುದು ಸಹಿಸಲು ಆಗುವುದಿಲ್ಲ. ಇದರ ಪರಿಣಾಮವಾಗಿ ಜನಪ್ರತಿನಿಧಿಗಳು ಸಾರ್ವಜನಿಕ ವಲಯದಲ್ಲಿ ಮುಜುಗರ ಅನುಭವಿಸುವಂತಾಗುವುದು. ಮುಂದಿನ ೪೦ ದಿನಗಳೊಳಗೆ ಪ್ರಗತಿ ತೋರಿಸಿ ವರದಿ ನೀಡುವಂತೆ ಸೂಚಿಸಿದರು.
ವಿಧಾನ ಪರಿಷತ್ ಶಾಸಕರಾದ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ ಜಿಲ್ಲಾ ಪಂಚಾಯತ್ಗಾಗಿ ಅಚ್ಚುಕಟ್ಟಾದ ಮತ್ತು ಸುವ್ಯವಸ್ಥಿತ ಜಿಲ್ಲಾ ಪರಿಷತ್ ಕಟ್ಟಡ ಕಟ್ಟಲು ೫ ಎಕರೆ ಜಾಗ ಅವಶ್ಯಕತೆ ಇದ್ದು, ಜಿಲ್ಲಾಡಳಿತ ಸೂಕ್ತ ಜಾಗ ಗುರುತಿಸಿ ಕೊಟ್ಟಲ್ಲಿ ಸುಸಜ್ಜಿತ ಜಿಲ್ಲಾ ಪರಿಷತ್ ಕಟ್ಟಡದಲ್ಲಿ ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ೧೧೦ ಕೋಟಿ ಮೊತ್ತದ ಅನುದಾನ ಬಾಕಿ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಬರಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಗೆ ತಿಳಿಸಿದರು. ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿ ಅನುದಾನ ತರಿಸಲು ಪ್ರಸ್ತಾವನೆ ಸಲ್ಲಿಸಲು ಸಚಿವರು ಸೂಚಿಸಿದರು.
ಸಭೆಯಲ್ಲಿ ಉಳಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಸ್ಕಾಂ, ಮನ್ ನರೇಗಾ, ವಸತಿ ಶಿಕ್ಷಣ ಸಂಸ್ಥೆಗಳು, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು ಮತ್ತು ಪ್ರಮುಖ ಸಮಸ್ಯೆಗಳ ನಿವಾರಣೆಗೆ ಸಚಿವರು ಅಗತ್ಯ ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರು ಜಲ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನರಾದ ಜಿಲ್ಲಾ ಪಂಚಾಯತ್ ಆಧಿಕಾರಿಗಳನ್ನು ಪ್ರಶಂಸಿಸಿದರು.
ಸಭೆಯಲ್ಲಿ ಕೋಲಾರ ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಕೆ.ಜಿ.ಎಫ್ ಶಾಸಕಿ ಡಾ. ರೂಪಕಲಾ ಶಶಿಧರ್, ವಿಧಾನ ಪರಿಷತ್ ಶಾಸಕ ಎಂ.ಎಲ್. ಅನಿಲ್ ಕುಮಾರ್, ಕೆ.ಡಿ.ಪಿ. ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ನಿಖಿಲ್, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗಾರ್, ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಚಿತ್ರ : ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಬಿ.ಎಸ್. ಸುರೇಶ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಯೋಜನೆ (ಕೆಡಿಪಿ)ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್