ಅರಣ್ಯ ಒತ್ತುವರಿ ತೆರವು ಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವರ ತಾಕೀತು
ಅರಣ್ಯ ಒತ್ತುವರಿ ತೆರವು ಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವರ ತಾಕೀತು
ಅರಣ್ಯ ಒತ್ತುವರಿ ತೆರವು ಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವರ ತಾಕೀತು


ಕೋಲಾರ, ೨೧ ನವೆಂಬರ್ (ಹಿ.ಸ) :

ಆ್ಯಂಕರ್ : ಅರಣ್ಯ ಒತ್ತುವರಿ ತೆರುವಿಗೆ ಜನಪ್ರತಿನಿಧಿಗಳಿಂದಲ್ಲೇ ಅಡ್ಡಿ ಎದುರಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕೋಲಾರ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಏಡುಕೊಂಡಲು ಅವರು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಒತ್ತುವರಿ ತೆರವುಗೊಳಿಸಿ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ಅಂದಿನ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಇತರರು ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಆದರೂ ಎದೆಗುಂದದೆ ಎಡುಕೊಂಡಲು ಅವರು ಮುನ್ನುಗ್ಗಿ ಒತ್ತುವರಿ ತೆರವುಗೊಳಿಸಿ ಅರಣ್ಯ ಇಲಾಖೆಯ ವಶಕ್ಕೆ ತೆಗೆದುಕೊಂಡು ಭೂಮಿಯಲ್ಲಿ ಗಿಡಗಳನ್ನು ನಾಟಿ ಮಾಡಿದ್ದರು.

ನಾನಾ ಒತ್ತಡಗಳು ಮತ್ತು ಟೀಕೆಗಳು ಎದುರಾದರು ಎಡುಕೊಂಡಲು ಅವರು ದಿಟ್ಟ ತನದಿಂದ ಒತ್ತುವರಿ ಕಾರ್ಯಾಚರಣೆ ನಡೆಸಿದ್ದರು. ಶ್ರೀನಿವಾಸಪುರ ತಾಲ್ಲೂಕಿನ ಪ್ರಭಾವಿ ರಾಜಕಾರಣಿ ರಮೇಶ್ ಕುಮಾರ್ ಮಾಡಲಾಗಿರುವ ಒತ್ತುವರಿ ತೆರುವುಗೊಳಿಸಲು ಮುಂದಾಗಿದ್ದರು. ರಮೇಶ್ ಕುಮಾರ್ ಬೆನ್ನಿಗೆ ಪರೋಕ್ಷವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ನಿಂತ ಕಾರಣ ಒತ್ತುವರಿ ತೆರುವು ಕಾರ್ಯಾಚರಣೆ ವಿಳಂಬವಾಯಿತು.

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ರಮೇಶ್ ಕುಮಾರ್ ಅವರಿಗೆ ನೆರವಾಗಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಅರಣ್ಯ ಉಪವಿಭಾಗಾಧಿಕಾರಿಗಳನ್ನು ಸಮಿತಿಯಿಂದ ಹೊರಗಿಟ್ಟಿದ್ದರು. ಪ್ರಾದೇಶಿಕ ಆಯುಕ್ತರು ಕೈಗೊಂಡ ಕ್ರಮ ಸರಿಯಿಲ್ಲ ಇದರಿಂದಾಗಿ ಮುಂದೆ ನ್ಯಾಯಾಲಯದಲ್ಲಿ ರಮೇಶ್ ಕುಮಾರ್ ಅವರಿಗೆ ಅನುಕೂಲ ಆಗಲಿದೆ. ಒಂದುವೇಳೆ ರಮೇಶ್ ಕುಮಾರ್ ನ್ಯಾಯಾಲಯದಲ್ಲಿ ಅರಣ್ಯ ಇಲಾಖೆಯ ಕ್ರಮವನ್ನು ಪ್ರಶ್ನೆ ಮಾಡಿದರೆ ಇಲಾಖೆಗೆ ತೀವ್ರ ಹಿನ್ನಡೆ ಆಗಲಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಏಡುಕೊಂಡಲು ಅವರು ಬರೆದ ಪತ್ರದಿಂದ ಎಚ್ಚೆತ್ತುಕೊಂಡ ಸರ್ಕಾರ ಜಿಲ್ಲಾಧಿಕಾರಿಗಳು, ಉಪಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಿತ್ತು. ಈ ಮಧ್ಯೆ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳ ಬೇಕೆಂದು ಶ್ರೀನಿವಾಸಪುರದ ವಕೀಲ ಶಿವಾರೆಡ್ಡಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶ ಮಾಡಿ ಒತ್ತುವರಿ ಗುರುತಿಸಲು ಜಂಟಿ ಸರ್ವೆ ನಡೆಸಬೇಕು. ಸರ್ವೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಆದೇಶ ಮಾಡಿತ್ತು. ಆ ವೇಳೆಗೆ ಏಡುಕೊಂಡಲು ಅವರಿಗೆ ಬಡ್ತಿ ದೊರೆತು ಕೋಲಾರದಿಂದ ವರ್ಗಾವಣೆ ಆದರು. ಹೈಕೋರ್ಟ್ ಆದೇಶದ ಮೇರೆಗೆ ಜಂಟಿ ಸರ್ವೆ ನಡೆಸಿ ರಮೇಶ್ ಕುಮಾರ್ ೫೩ ಎಕರೆ ಒತ್ತುವರಿ ಮಾಡಿರುವುದಾಗಿ ವರದಿ ನೀಡಲಾಯಿತು.

ಈ ಆದೇಶದ ಮೇರೆಗೆ ಬೆಂಗಳೂರಿನ ಅರಣ್ಯ ಇಲಾಖೆಯ ಪ್ರಾದೇಶಿಕ ಸಂರಕ್ಷಣಾಧಿಕಾರಿಗಳು ರಮೇಶ್ ಕುಮಾರ್ ಒತ್ತುವರಿ ಪ್ರಕರಣದ ವಿಚಾರಣೆ ಆರಂಭಿಸಿದರು. ರಮೇಶ್ ಕುಮಾರ್ ಹೈಕೋರ್ಟ್‌ಗೆ ಹೋಗಿ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದರು. ಏಡುಕೊಂಡಲು ಅವರು ವರ್ಗಾವಣೆ ಆದ ನಂತರ ಅವರ ಸ್ಥಾನಕ್ಕೆ ನೇಮಕವಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗಾರ್ ದಿಟ್ಟ ತನದಿಂದ ಒತ್ತುವರಿ ತೆರುವು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆದರೆ ಹೆಜ್ಜೆ ಹೆಜ್ಜೆಗೂ ಅವರು ಆಡಳಿತ ಮತ್ತು ಪ್ರತಿಪಕ್ಷದ ಶಾಸಕರಿಂದ ಅಡ್ಡಿ ಆತಂಕ ಅಪಮಾನಗಳನ್ನು ಎದುರಿಸುತ್ತಿದ್ದಾರೆ.

ಕೋಲಾರ ತಾಲ್ಲೂಕಿನ ಹರಟಿ ಭಾಗದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅರಣ್ಯ ಪ್ರದೇಶವಿದೆ. ಹಲವು ವರ್ಷಗಳ ಹಿಂದೆ ಕಂದಾಯ ಇಲಾಖೆ ಅರಣ್ಯ ಭೂಮಿಯನ್ನು ರೈತರಿಗೆ ಮಂಜೂರು ಮಾಡಿತ್ತು. ಕೆಲವರು ಅರಣ್ಯ ಭೂಮಿ ಮಂಜೂರಾತಿ ಆದ ನಂತರ ಬೇರೆಯವರಿಗೆ ಮಾರಾಟ ಮಾಡಿದ್ದರು. ಖರೀದಿ ಮಾಡಿದವರು ಕೊಳವೆ ಬಾವಿ ಕೊರೆದು ತೋಟಗಳನ್ನು ಮಾಡಿದ್ದಾರೆ. ಈ ಪ್ರದೇಶದ ಒತ್ತುವರಿ ತೆರುವು ಕಾರ್ಯಾಚರಣೆ ಆರಂಭಿಸಿದ ನಂತರ ಪ್ರತಿದಿನ ಅರಣ್ಯ ಇಲಾಖೆಯ ಅಧಿಕಾರಿಗಳು ತೀವ್ರತರವಾದ ಪ್ರತಿರೋಧ ಎದುರಿಸುತ್ತಿದ್ದಾರೆ.

ಒತ್ತುವರಿ ಮಾಡಿರುವ ಪೈಕಿ ಕೆಲವರು ದಲಿತರಿದ್ದು ಈ ಹಿಂದೆ ನಮಗೆ ಭೂಮಿ ಮಂಜೂರು ಮಾಡಲಾಗಿದೆ. ಗೋಮಾಳ ಆಗಿದ್ದು ಕಂದಾಯ ಇಲಾಖೆಗೆ ಸೇರಿದೆ ಆದರೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿ ನಾವು ಬೆಳೆಸಿದ ಬೆಳೆ ನಾಶ ಮಾಡಲಾಗಿದೆ ಎಂದು ಆರೋಪಿಸಿ ಕೋಲಾರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ವಿರೋಧಿ ಕಾಯ್ದೆ ಮೇರೆಗೆ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರು.

ದಿಶಾ ಮತ್ತು ಕೆಡಿಪಿ ಸಭೆಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಆಳುವ ಪಕ್ಷ ಮತ್ತು ಪ್ರತಿ ಪಕ್ಷದ ಜನಪ್ರತಿನಿಧಿಗಳ ಬಾಯಿಗೆ ಆಹಾರ ಆಗಿದ್ದಾರೆ. ಕಳೆದ ವಾರ ನಡೆದ ದಿಶಾ ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಹೊರಹೋಗುವಂತೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮುಗಿಬಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಹೀನಾ ಮಾನವಾಗಿ ನಿಂದಿಸಿ ಹೊರಹೋಗುವಂತೆ ಹೇಳಿ ಅಪಮಾನ ಮಾಡಲಾಯಿತು.

ಕೊಲಾರದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತ್ತೆ ಅರಣ್ಯ ಇಲಾಖೆಯ ಅಧಿಕಾರಿಗಳು ತೀವ್ರ ಮುಜುಗರ ಮತ್ತು ಅಪಮಾನ ಅನುಭವಿಸ ಬೇಕಾಯಿತು. ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಜನಪ್ರತಿನಿಧಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಈ ಹಿಂದೆ ಗೋಮಾಳ ಹಾಗೂ ಕಂದಾಯ ಇಲಾಖೆಯ ಜಮೀನುಗಳನ್ನು ರೈತರಿಗೆ ಮಂಜೂರು ಮಾಡಲಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಈಗಾಗಲೇ ಮೂರು ಎಕರೆ ವರೆಗೂ ಒತ್ತುವರಿ ಮಾಡಿದರೆ ಅಂತಹವರನ್ನು ಒಕ್ಕಲೆಬ್ಬಿಸ ಬಾರದೆಂದು ಸರ್ಕಾರವೇ ಆದೇಶಿಸಲಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರ ಮತ್ತು ಜನಪ್ರತಿನಿಧಿಗಳ ಮಾತಿಗೆ ಮೀರಿ ಒತ್ತುವರಿ ತೆರವು ಮಾಡುತ್ತಿದ್ದಾರೆಂದು ತೀವ್ರವಾಗಿ ಆರೋಪಿಸಿದರು.

ಈಗಾಗಲೇ ಎಸ್‌ಐಟಿ ರಚನೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಎಸ್‌ಐಟಿ ಜಂಟಿ ಸರ್ವೆ ಮಾಡಿ ವರದಿ ಸಲ್ಲಿಸಬೇಕು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಮಾಡುತ್ತಿದ್ದಾರೆ ಎಂದು ಶಾಸಕರಾದ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್, ಮಾಲೂರು ಶಾಸಕ ನಂಜೇಗೌಡ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿಗಳ ವಿರುದ್ಧ ಮುಗಿಬಿದ್ದರು. ಉಪಅರಣ್ಯ ಸಂರಕ್ಷಣಾಧಿಕಾರಿ ವಿವರಣೆ ನೀಡಿದರು ಅದನ್ನು ಗಂಭೀರವಾಗಿ ಯಾರೂ ಪರಿಗಣಿಸಿಲ್ಲ. ನಾವು ಹೇಳಿದ್ದೇ ಅಂತಿಮ ನಮ್ಮ ಸಲಹೆ ಸೂಚನೆಗಳನ್ನು ನೀವು ಪಾಲಿಸಬೇಕೆಂಬಂತಿತ್ತು. ಆಡಳಿತ ಪಕ್ಷದ ಶಾಸಕರ ಧೋರಣೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಎಸ್‌ಐಟಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಉನ್ನತ ಮಟ್ಟದ ಸಮಿತಿ ಪರಿಶೀಲನೆ ನಡೆಸಲಿದೆ ಅಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳ ಬಾರದೆಂದು ಸೂಚಿಸಿದರು. ಇದರಿಂದಾಗಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ. ಮುಗ್ದ ರೈತರ ಹೆಸರಿನಲ್ಲಿ ಒತ್ತುವರಿ ಮಾಡಿರುವ ಬಲಾಡ್ಯರು ಕೇಕೆ ಹಾಕುತ್ತಿದ್ದಾರೆ.

ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರ ಧೋರಣೆಯಿಂದಾಗಿ ಇಡೀ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಮಾನಸಿಕವಾಗಿ ಕುಗ್ಗಿದ್ದಾರೆ. ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿದ್ದಾರೆ. ಆಡಳಿತ ಪಕ್ಷದ ಶಾಸಕರ ಮತ್ತು ಸಚಿವರ ಧೋರಣೆಯಿಂದಾಗಿ ಒತ್ತುವರಿದಾರರಿಗೆ ಬಲ ಬಂದಂತ್ತಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande