

ಕೊಪ್ಪಳ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ಮೆದುಳು ಆರೋಗ್ಯ ಹಾಗೂ ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್ ಹೇಳಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಭೀ) ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ನಿಮಿತ್ಯ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಮೆದುಳು ಆರೋಗ್ಯ ಹಾಗೂ ಅದಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಲಭ್ಯವಿದೆ. ಇದರ ಜೊತೆಗೆ ಹಾವಿನ ಕಡಿತಕ್ಕೆ ಲಸಿಕೆ ಸಿಗುತ್ತದೆ. ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತಾಗಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೊಪ್ಪಳ ವೈದ್ಯಕೀಯ ಬೋಧಕ ಆಸ್ಪತ್ರೆಯ ಎಂಡಿ ಫಿಜಿಶಿಯನ್ ಡಾಕ್ಟರ್ ವಿಜಯ್ ಸಿಂಗ್ ಅವರು ಮಾತನಾಡಿ, ರಾಷ್ಟ್ರೀಯ ಅಪಸ್ಮಾರ ದಿನವನ್ನು ಪ್ರತಿ ವರ್ಷ ನವೆಂಬರ್ 17 ರಂದು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿ, ಅಪಸ್ಮಾರ (ಮೂರ್ಛೆರೋಗ)ದ ಲಕ್ಷಣಗಳು, ಅದಕ್ಕೆ ಕಾರಣಗಳು, ಯಾವ ರೀತಿ ಗುರುತಿಸುವುದು ಅಪಸ್ಮಾರಕ್ಕಿರುವ ಮಿಥ್ಯ ಹಾಗೂ ಸತ್ಯಗಳು ಹಾಗೂ ಅಪಸ್ಮಾರ ಉಂಟಾದ ವ್ಯಕ್ತಿಗೆ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಹಾಗೂ ಔಷಧೋಪಚಾರವನ್ನು ಯಾವ ರೀತಿ ತೆಗೆದುಕೊಳ್ಳಬೇಕು ಮತ್ತು ಕಭಿ ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಪ್ರಧಾನಿ ಮೋದಿಯವರು ಹೇಳಿದಂತೆ ಭಾರತ 2025ಕ್ಕೆ ಕ್ಷಯರೋಗ ಮುಕ್ತವಾಗಬೇಕು. ಅದರಂತೆ ನಮ್ಮ ಜಿಲ್ಲೆ ಮತ್ತು ರಾಜ್ಯವನ್ನು ಕ್ಷಯಮುಕ್ತವನ್ನಾಗಿಸಲು ನಾವೆಲ್ಲೂರು ಸಹಕರಿಸಬೇಕು. ಕೊಪ್ಪಳ ಜಿಲ್ಲೆಯು ಬಾಲ್ಯ ವಿವಾಹದಲ್ಲಿ ಎರಡನೇ ಸ್ಥಾನದಲ್ಲಿದ್ದು, ಹಾಗಾಗಿ ನಾವೆಲ್ಲರೂ ಬಾಲ್ಯ ವಿವಾಹವನ್ನು ತಡೆಗಟ್ಟಲು ಸಹ ಕೈಜೋಡಿಸಬೇಕು ಎಂದು ಹೇಳಿದರು.
ಕಭೀ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ತೇಜಸ್ವಿನಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಭಿ ತಂಡದವರು ಹಾಗೂ ಪೊಲೀಸ್ ಇಲಾಖೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಎಲ್ಲ ಸಿಬ್ಬಂದಿ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್