
ಕೊಪ್ಪಳ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಉದ್ದೇಶಿತ ಬಿ ಎಸ್ ಪಿ ಎಲ್ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡಿದ್ದು ಕೇಂದ್ರ ಸರಕಾರ ಎಂಬ ಹೇಳಿಕೆ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ತಮಗೆ ಸಾಮಾನ್ಯ ಜ್ಞಾನ ಇಲ್ಲ ಎಂಬುದನ್ನು ಸಾರ್ವಜನಿಕವಾಗಿ ಸಾಬೀತುಪಡಿಸಿದ್ದಾರೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ. ವಿ. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆ ಸ್ಥಾಪನೆ ವಿಚಾರದಲ್ಲಿ ಪರಿಸರ ಸಂಬಂಧಿತ ವಿಷಯಗಳ ಕುರಿತು ಮಾತ್ರ ಅನುಮತಿ ನೀಡುವ ಇಲ್ಲವೇ ನಿರಾಕರಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. ಖಾಸಗಿ ಕಂಪನಿ ಜೊತೆಗೆ ಒಪ್ಪಂದ, ಜಮೀನು ಹಂಚಿಕೆ ಹಾಗೂ ತೆರಿಗೆಯಂತಹ ಮಹತ್ವದ ವಿಷಯಗಳನ್ನು ನಿರ್ಣಯಿಸುವ ಅಧಿಕಾರ ರಾಜ್ಯ ಸರ್ಕಾರದ್ದು. ಇದರಲ್ಲಿ ಕೇಂದ್ರ ಸರಕಾರದ ಪಾತ್ರ ಇಲ್ಲ. ಇಂತಹ ವಿಷಯ ಸಾಮಾನ್ಯ ಜನರಿಗೂ ತಿಳಿದಿರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಲ್ಲಿದ್ದು ಇಂತಹ ಹೇಳಿಕೆ ನೀಡಿ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವುದು ತರವಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲವೇ ತಿಂಗಳುಗಳಲ್ಲಿ ಕಾರ್ಖಾನೆ ಆರಂಭವಾಗುವ ನಿರೀಕ್ಷೆ ಇದೆ. ಈಗ ಕೇಂದ್ರದ ಜೊತೆ ಪತ್ರ ವ್ಯವಹಾರ ನಡೆಸುವಂತೆ ಮುಖ್ಯಮಂತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಜೊತೆ ಚರ್ಚೆ ನಡೆಸುವೆ ಎಂಬ ಹೇಳಿಕೆ ನೀಡಿದ್ದಾರೆ. ಕಳೆದ 15 ವರ್ಷಗಳಿಂದಲೂ ಕೊಪ್ಪಳದಲ್ಲಿ ಕಾಂಗ್ರೆಸ್ ಶಾಸಕರು ಅಧಿಕಾರದಲ್ಲಿದ್ದಾರೆ. ಆ ಸಂದರ್ಭದಲ್ಲಿ ತಂಗಡಗಿ ಶಾಸಕ ಮತ್ತು ಸಚಿವರಾಗಿದ್ದವರು. ಕಾರ್ಖಾನೆ ಸ್ಥಾಪಿಸಲು ಚಟುವಟಿಕೆ ನಡೆಯುತ್ತಿದ್ದರೂ ಏನು ಮಾಡದ ಇವರು ಈಗ ಚರ್ಚಿಸುತ್ತೇನೆ ಎನ್ನುವುದು ವ್ಯಂಗ್ಯ ಮತ್ತು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಷದ ಹಿಂದೆ ಶಾಲಾ ತರಗತಿಯ ಬೋರ್ಡ್ ಮೇಲೆ ಅಕ್ಷರವನ್ನು ತಪ್ಪಾಗಿ ಬರೆದು ರಾಜ್ಯಾದ್ಯಂತ ನಗೆಪಾಟಲಿಗೀಡಾಗಿದ್ದರು. ಕಾರ್ಖಾನೆಗಳ ಪರವಾಗಿ ತಂಗಡಗಿ ಮಾತನಾಡುತ್ತಿರುವುದು ಒಳ ಒಪ್ಪಂದದ ಪರಿಣಾಮ ಎಂದು ಇತ್ತೀಚಿಗೆ ನಾಯಕರೊಬ್ಬರು ಆರೋಪಿಸಿದ್ದರು. ಇಂತಹ ಘಟನೆಗಳು ತಂಗಡಗಿ ಸಚಿವರಾಗಿ ಮುಂದುವರೆಯಲು ಅಸಮರ್ಥ ಎಂದೇ ಸಾಬೀತುಪಡಿಸಿವೆ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಸಿವಿಸಿ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್