
ಧಾರವಾಡ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕ ಭಾಗದ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್ ಇತ್ತೀಚೆಗೆ ಅತ್ಯಾಧುನಿಕ ಪರ್ಕ್ಯುಟೇನಿಯಸ್ ಎಂಡೋವ್ಯಾಸ್ಕೂಲರ್ ಆಸ್ಪಿರೇಷನ್ ಥ್ರಾಂಬೆಕ್ಟಮಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಮಹತ್ವದ ಸಾಧನೆ ಮಾಡಿದೆ. ಈ ಚಿಕಿತ್ಸಾ ಕ್ರಮದ ಮೂಲಕ ಕೆಲವೇ ವಾರಗಳ ಅಂತರದಲ್ಲಿ ಆಸ್ಪತ್ರೆಗೆ ದಾಖಲಾದ ಆರು ಮಹಿಳೆಯರಿಗೆ, ಹಾಗೂ ನಾಲ್ಕು ಪುರುಷ ರೋಗಿಗಳಿಗೆ ನೋವಿನಿಂದ ಮುಕ್ತಿ ನೀಡಲಾಗಿದೆ, ಈ ನಿಟ್ಟಿನಲ್ಲಿ ಆಸ್ಪತ್ರೆಯು ಡೀಪ್ ವೇನ್ ಥ್ರೋಂಬೋಸಿಸ್ (ಡಿವಿಟಿ) ರೋಗಿಗಳಿಗೆ ಜೀವರಕ್ಷಕವಾಗಿ ಮೂಡಿಬಂದಿದೆ.
ಕನ್ಸಲ್ಟೆಂಟ್ ವ್ಯಾಸ್ಕೂಲರ್ ಆಂಡ್ ಎಂಡೋವ್ಯಾಸ್ಕೂಲರ್ ಸರ್ಜನ್ ಡಾ. ಬಸವರಾಜೇಂದ್ರ ಶಿವಪ್ಪ ಆನೂರಶೆಟ್ರು ಈ ಎಂಡೋವ್ಯಾಸ್ಕೂಲರ್ ಆಸ್ಪಿರೇಷನ್ ಥ್ರಾಂಬೆಕ್ಟಮಿಯನ್ನು ಯಶಸ್ವಿಯಾಗಿ ನಡೆಸಿದ್ದು, ಈ ಮೂಲಕ ಇಲಿಯಾಕ್ ರಕ್ತನಾಳಗಳು ಮತ್ತು ಇನ್ಫೀರಿಯರ್ ವೇನಾ ಕಾವಾ (ಐವಿಸಿ) ಸೇರಿದಂತೆ ಪ್ರಮುಖ ರಕ್ತನಾಳಗಳಲ್ಲಿ ಇದ್ದ ಜೀವಕ್ಕೆ ಅಪಾಯಕಾರಿಯಾಗಬಹುದಾದ ಕ್ಲಾಟ್ (ಹೆಪ್ಪುಗಟ್ಟಿದ ರಕ್ತದ ಕಣ) ಗಳನ್ನು ಯಶಸ್ವಿಯಾಗಿ ತೆಗೆದು ರಕ್ತದ ಹರಿವನ್ನು ಮೊದಲಿನಂತೆ ಮಾಡಿ ಸಂಭಾವ್ಯ ಅಪಾಯವನ್ನು ತಡೆದಿದ್ದಾರೆ
32 ರಿಂದ 67 ವರ್ಷ ವಯಸ್ಸಿನ ಆರು ಮಹಿಳೆಯರು ಗದಗ, ಕೊಪ್ಪಳ, ಹಾಗೂ ಹುಬ್ಬಳ್ಳಿ-ಧಾರವಾಡ ದಿಂದ ಹಾಗೂ ೨೮ ರಿಂದ ೬೩ ವಯಸ್ಸಿನ ನಾಲ್ಕು ಪುರುಷರು ಬಾಗಲಕೊಟೆ ಹಾಗೂ ಗದಗ ದಿಂದ ತಮ್ಮ ಕಾಲುಗಳಲ್ಲಿ ಇದ್ದಕ್ಕಿದ್ದಂತೆ ಕಾಲಿನಲ್ಲಿ ನೋವು ಮತ್ತು ಊತದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಕಾಲಿನಲ್ಲಿ ನೋವು ಮತ್ತು ಊತ ಉಂಟಾಗುವುದು ಡಿವಿಟಿಯ ಸಾಮಾನ್ಯ ಲಕ್ಷಣವಾಗಿದ್ದು, ಸಕಾಲಿಕ ಚಿಕಿತ್ಸೆ ನೀಡಲಾಯಿತು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ, ಡಾ. ಬಸವರಾಜೇಂದ್ರ ಶಿವಪ್ಪ ಆನೂರಶೆಟ್ರು ಈ ರೋಗಿಗಳಿಗೆ ಮೆಕಾನಿಕಲ್ ಆಸ್ಪಿರೇಷನ್ ಥ್ರೋಂಬೇಕ್ಟಮಿ ವಿಧಾನವನ್ನು ಬಳಸಿ ಚಿಕಿತ್ಸೆ ನೀಡಿದರು.
ಈ ವಿಧಾನವು ಹೆಪ್ಪುಗಟ್ಟಿದ ರಕ್ತದ ಕಣಗಳನ್ನು ಸುರಕ್ಷಿತವಾಗಿ ತೆಗೆಯಲು ನೆರವಾಗುವ ಅತ್ಯಾಧುನಿಕ ಕ್ಯಾಥೆಟರ್ ಆಧಾರಿತ ತಂತ್ರಜ್ಞಾನವಾಗಿದೆ. ಈ ಚಿಕಿತ್ಸಾ ಕ್ರಮ ನಡೆಸಲು ಆರಂಭಿಕ ಹಂತದಲ್ಲಿಯೇ ಸಮಸ್ಯೆ ಪತ್ತೆ ಹಚ್ಚುವುದು ಅಗತ್ಯ ಎಂದು ತಿಳಿಸಿದ ಡಾ. ಆನೂರಶೆಟ್ರು ಅವರು, “ಡಿವಿಟಿಯನ್ನು ಜನರು ಸಾಮಾನ್ಯವಾಗಿ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವದಿಲ್ಲ. ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಪಲ್ಮನರಿ ಎಂಬಾಲಿಸಂ ಎಂಬ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗಬಹುದು. ಅಲ್ಲದೇ ಕ್ಲಾಟ್ ಗಳು ಶ್ವಾಸಕೋಶಕ್ಕೆ ಹೋದರೆ ಜೀವಕ್ಕೆ ಅಪಾಯ ಉಂಟಾಗಬಹುದಾಗಿದೆ. ಆದರೆ ಇದನ್ನು ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ ಉಂಟಾಗಬಹುದು. ಶೀಘ್ರವಾಗಿ ರೋಗನಿರ್ಣಯ ಮಾಡುವುದು ಮತ್ತು ಆಸ್ಪಿರೇಷನ್ ಥ್ರಾಂಬೆಕ್ಟಮಿಯಂತಹ ಅತ್ಯಾಧುನಿಕ ಚಿಕಿತ್ಸಾ ಕ್ರಮಗಳು ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಇದೇ ವೇಳೆ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್ ನ ವೈದ್ಯಕೀಯ ಅಧೀಕ್ಷಕರಾದ ಡಾ. ಕೀರ್ತಿ ಪಿ.ಎಲ್ ಮಾತನಾಡಿ, “ಉತ್ತರ ಕರ್ನಾಟಕ ಭಾಗದ ಜನರಿಗೆ ಅತ್ಯಾಧುನಿಕ ಮತ್ತು ವಿಶ್ವದರ್ಜೆಯ ಹೃದಯ ಚಿಕಿತ್ಸೆ ಮತ್ತು ವ್ಯಾಸ್ಕೂಲರ್ ಚಿಕಿತ್ಸೆಯನ್ನು ಸುಲಭವಾಗಿ ಒದಗಿಸುತ್ತಿದೆ. ಈ ಎಲ್ಲ ಪ್ರಕರಣಗಳು ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿನ ಈ ಆಸ್ಪತ್ರೆಯು ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಪುರಾವೆಯಾಗಿದೆ. ಇನ್ನು ಮುಂದೆಯೂ ಶ್ರೇಷ್ಠ ಚಿಕಿತ್ಸೆ ಒದಗಿಸುವುದನ್ನು ಆಸ್ಪತ್ರೆಯು ಮುಂದುವರಿಸಲಿದೆ,” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾರುಕಟ್ಟೆ ಮುಖ್ಯಸ್ಥ ಅಜೇಯ ಹುಲಮನಿ, ಸಹಾಯಕ ಮಾರುಕಟ್ಟೆ ಮುಖ್ಯಸ್ಥ ದುಂಡೇಶ್ ತಡಕೋಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa