
ರಾಮನಗರ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕದಲ್ಲಿ ಅಂಗನವಾಡಿ ಆರಂಭಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮುಖ ಮೂರು ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಇದೊಂದು ಹೊಸ ಇತಿಹಾಸ ಸೃಷ್ಟಿಸುವ ಕಾರ್ಯಕ್ರಮವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಸಚಿವರು ಮಾತನಾಡಿದರು.
ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಗೆ ಚಾಲನೆ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿ ಅಂದು ನಡೆಯಲಿದ್ದು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದು ಅವರು ಕರೆ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್, ದೇಶಕಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಅಂದರೆ ಗ್ಯಾರಂಟಿ ಸರ್ಕಾರ ಅಂತ ಅರ್ಥ. ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳೆಯರ ಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೆಬ್ಬಾಳಕರ್ ಹೇಳಿದರು.
ಇಡೀ ದೇಶವೇ ಬಡತನದಿಂದ ಬಳಲುತ್ತಿದ್ದ ವೇಳೆ ಬಡ ಮಕ್ಕಳಿಗೂ ಪೌಷ್ಠಿಕ ಆಹಾರ ಸಿಗಬೇಕು. ಪೌಷ್ಠಿಕ ಆಹಾರದ ಜೊತೆಗೆ ಶಿಕ್ಷಣ ಕೂಡ ಸಿಗಬೇಕು ಎನ್ನುವ ದೃಷ್ಟಿಯಿಂದ 1975ರಲ್ಲಿ ಮೈಸೂರು ಜಿಲ್ಲೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಅಂಗನವಾಡಿ ಆರಂಭಿಸಿದರು. ಇದೀಗ ಅಂಗನವಾಡಿ ಆರಂಭವಾಗಿ 50 ವರ್ಷ ಪೂರೈಸಿದೆ. ಹಾಗಾಗಿ ಅಂದಿನ ಕಾರ್ಯಕ್ರಮದಲ್ಲಿ ಅಕ್ಕಪಡೆ, ಎಲ್‌ಕೆಜಿ, ಯುಕೆಜಿಗೆ ಚಾಲನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಮುಂದುವರಿದ ಭಾಗವಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುವುದು. ಅರ್ಥಪೂರ್ಣ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಆಚರಿಸೋಣ ಎಂದರು.
ಕಳೆದ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನವನ್ನು 1000 ರೂಪಾಯಿ ಹೆಚ್ಚಿಸಲಾಗಿದೆ. ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮತ್ತೊಂದು ಸಾವಿರ ಹೆಚ್ಚಿಸುವಂತೆ ಮನವಿ ಮಾಡಲಾಗುವುದು. ಇದೇ ನಮ್ಮ ಸರ್ಕಾರದ ಮತ್ತೊಂದು ಗ್ಯಾರಂಟಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa